×
Ad

ಪ್ರತಿದಿನ 1 ಕೋಟಿ ಮಂದಿಗೆ ಲಸಿಕೆ ನೀಡಲು ಕಾಂಗ್ರೆಸ್ ಮನವಿ

Update: 2021-06-04 20:35 IST

ಮಂಗಳೂರು, ಜೂ 4: ದೇಶದಲ್ಲಿ ಪ್ರತಿ ದಿನ 1 ಕೋಟಿ ಜನತೆಗೆ ಕೋವಿಡ್ ನಿಯಂತ್ರಣ ಲಸಿಕೆಯನ್ನು ಸಂಪೂರ್ಣ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ರಾಷ್ಟ್ರಪತಿ ರಮಾನಾಥ್ ಕೋವಿಂದ್‌ಗೆ ದ.ಕ. ಜಿಲ್ಲಾ ಕಾಂಗ್ರೆಸ್ ಜಿಲ್ಲಾಧಿಕಾರಿ ಮೂಲಕ ಮನವಿ ಮಾಡಿದೆ.

ದೇಶದಲ್ಲಿ ಸದ್ಯ ಲಸಿಕೆ ನೀಡುತ್ತಿರುವ ಪ್ರಮಾಣ ಕಡಿಮೆ ಇದೆ. ಹೀಗೆ ಲಸಿಕೆ ನೀಡುತ್ತಾ ಹೋದರೆ ಎಲ್ಲರಿಗೂ ಲಸಿಕೆ ದೊರೆಯುವುದು ವಿಳಂಬವಾಗಬಹುದು. ಹಾಗಾಗಿ ಕೇಂದ್ರ ಸರಕಾರ ಉಚಿತ ಲಸಿಕೆ ನೀಡುವ ದಿನದ ಗುರಿಯನ್ನು ಒಂದು ಕೋಟಿಗೆ ನಿಗದಿ ಮಾಡಬೇಕು. ಕಳೆದ ಮೇ 31ರ ವರೆಗೆ 21.31 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಅಂದರೆ ಕೇವಲ 4.45 ಕೋಟಿ ಜನರಿಗೆ ಲಸಿಕೆ ನೀಡಿದಂತಾಗುತ್ತದೆ. ಇದು ಭಾರತದ ಜನಸಂಖ್ಯೆಯ ಕೇವಲ 3.17 ಮಾತ್ರ. ಕಳೆದ 134 ದಿನಗಳಲ್ಲಿ ಸರಾಸರಿ ದಿನವೊಂದಕ್ಕೆ ಕೇವಲ 16 ಲಕ್ಷ ಲಸಿಕೆ ಮಾತ್ರ ನೀಡಲಾಗುತ್ತಿದೆ. ಈ ರೀತಿಯಲ್ಲಿ ಲಿಸಿಕಾ ಕಾರ್ಯಕ್ರಮ ನಡೆದರೆ ಎಲ್ಲ ವಯಸ್ಕರಿಗೆ ಲಸಿಕೆ ನೀಡುವುದು ತಕ್ಷಣಕ್ಕೆ ಸಾಧ್ಯವಿಲ್ಲ. ಹಾಗಾಗಿ ಮೂರನೇ ಅಲೆಗೆ ಮುನ್ನ ದೇಶದ ಜನರ ರಕ್ಷಣೆ ಹೇಗೆ ಸಾಧ್ಯ ಎಂಬುದನ್ನು ಪ್ರಧಾನಿ ಮೋದಿ ಉತ್ತರಿಸಬೇಕಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಸರಕಾರವು ಮೂರು ರೀತಿಯ ದರ ನಿಗದಿ ಮಾಡಿರುವುದು ಸರಿಯಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ 600 ರೂ.ನಿಂದ 1,500 ರೂ. ದರದಲ್ಲಿ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಜನರ ಸಂಕಷ್ಟ ಕಾಲದಲ್ಲಿ ಮೋದಿ ಸರಕಾರವು ಕೆಲವು ಮಂದಿಗೆ ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಕಾಂಗ್ರೆಸ್ ಮನವಿಯಲ್ಲಿ ಹೇಳಿದೆ.

ಡಿಸಿಸಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಶಾಸಕ ಯು.ಟಿ.ಖಾದರ್, ಮಾಜಿ ಶಾಸಕರಾದ ಜೆ.ಆರ್.ಲೋಬೋ, ಶಕುಂತಳಾ ಶೆಟ್ಟಿ, ಮೊಯ್ದೀನ್ ಬಾವ ಮತ್ತಿತರರು ಕಾಂಗ್ರೆಸ್ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News