ಕರಾವಳಿ, ಒಳನಾಡಿನಲ್ಲಿ 3 ದಿನ ಭಾರೀ ಮಳೆ ಸಾಧ್ಯತೆ : ಪ್ರಾದೇಶಿಕ ಹವಾಮಾನ ಕೇಂದ್ರ
ಉಡುಪಿ, ಜೂ.4: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲದೇ, ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡು ಪ್ರದೇಶಗಳ ಅಲ್ಲಲ್ಲಿ ಮುಂದಿನ ಮೂರು ದಿನಗಳ ಕಾಲ ಬಿರುಗಾಳಿ, ಗುಡುಗು ಸಿಡಿಲು ಸಹಿತ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಬೆಂಗಳೂರಿನ ಪ್ರಾದೇಶಿಕ ಹವಾಮಾನ ಕೇಂದ್ರ ನೀಡಿದೆ.
ಈ ಅವಧಿಯಲ್ಲಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ 124.5ಮಿ.ಮೀ.ನಿಂದ 244.5ಮಿ.ಮೀ.ವರೆಗೂ ಮಳೆ ಸುರಿಯುವ ನಿರೀಕ್ಷೆ ಇದೆ. ಜೂ.5ರಿಂದ 7ರವರೆಗೆ ಈ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ.
ಸಿಡಿಲು ಬಡಿದು ಹಾನಿ: ಗುರುವಾರ ಸಂಜೆಯಿಂದ ಜಿಲ್ಲೆಯಾದ್ಯಂತ ಸಾಧಾರಣದಿಂದ ಭಾರೀ ಮಳೆ ಸುರಿದಿದೆ. ಕಾಪು ತಾಲೂಕಿನ ಪಡುಬೆಳ್ಳೆ ಗ್ರಾಮದ ಸೆಲ್ವಿ ಎಂಬವರ ಮನೆಗೆ ಸಿಡಿಲು ಬಡಿದು ಭಾರೀ ಹಾನಿ ಸಂಭವಿಸಿದ್ದರೆ, ಮಟ್ಟು ಗ್ರಾಮದ ಗೋಪಾಲ ಮರಕಾಲ ಎಂಬವರ ಮನೆಗೂ ಸಿಡಿಲು ಬಡಿದುದರಿಂದ ಮನೆ ಬಿರುಕು ಬಿಟ್ಟಿದ್ದಲ್ಲದೇ, ಮನೆಯ ವಿದ್ಯುತ್ ವಯರಿಂಗ್, ಉಪಕರಣಗಳು ಹಾನಿಗೊಂಡಿವೆ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಜಿಲ್ಲೆಯ ಕಾಪು ತಾಲೂಕಿನಲ್ಲಿ 96ಮಿ.ಮೀ., ಉಡುಪಿಯಲ್ಲಿ 59ಮಿ.ಮೀ., ಬ್ರಹ್ಮಾವರದಲ್ಲಿ 53ಮಿ.ಮೀ., ಕಾರ್ಕಳದಲ್ಲಿ 40, ಬೈಂದೂರಿನಲ್ಲಿ 27, ಕುಂದಾಪುರದಲ್ಲಿ 26 ಹಾಗೂ ಹೆಬ್ರಿ ತಾಲೂಕಿನಲ್ಲಿ 20ಮಿ.ಮೀ. ಮಳೆ ಸುರಿದ ಬಗ್ಗೆ ದಾಖಲಾಗಿದೆ.