ಉಡುಪಿ ಜಿಲ್ಲಾ ಗೃಹರಕ್ಷಕ ದಳ ಕಚೇರಿಗೆ ಪ್ರವಾಹ ರಕ್ಷಣಾ ಸಾಮಗ್ರಿಗಳ ವಿತರಣೆ
ಉಡುಪಿ, ಜೂ.4: ಬೆಂಗಳೂರಿನ ಡಿಜಿಪಿ ಕಚೇರಿಯಿಂದ ಉಡುಪಿ ಜಿಲ್ಲಾ ಗೃಹರಕ್ಷಕ ಕಚೇರಿಗೆ ಬಂದ ಜಿಲ್ಲೆಯಲ್ಲಿ ನೆರೆ ಸಂದರ್ಭದಲ್ಲಿ ಬಳಸುವ ಪ್ರವಾಹ ರಕ್ಷಣಾ ಸಾಮಗ್ರಿಗಳನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ವಿವಿಧ ಘಟಕಗಳಿಗೆ ಹಸ್ತಾಂತರಿಸಿದರು.
ಜಿಲ್ಲೆಗೆ ಎರಡು ಇನ್‌ಫ್ಲೆಟೇಬಲ್ ಬೋಟ್, ಒಂದು ಒಬಿಎಂ ನೀಡಲಾ ಗಿದ್ದು, ಇದರೊಂದಿಗೆ ಉಡುಪಿ ಜಿಲ್ಲಾಡಳಿತ ನೀಡಿರುವ ರೈನ್‌ಕೋಟ್, ಲೈಫ್ ಜಾಕೆಟ್, ಟ್ಯೂಬ್, ಗಮ್‌ಬೂಟ್ ಮತ್ತು ಹಗ್ಗಗಳನ್ನು ಜಿಲ್ಲಾಧಿಕಾರಿ ಜಿ. ಜಗದೀಶ್, ಪ್ರವಾಹ ಪೀಡಿತ ಸ್ಥಳಗಳಾದ ಪಡುಬಿದ್ರಿ ಮತ್ತು ಬ್ರಹ್ಮಾವರದ ಘಟಕಾಧಿಕಾರಿಗಳಾದ ನವೀನ್‌ಕುಮಾರ್ ಹಾಗೂ ಸ್ಟೀವನ್ ಪ್ರಕಾಶ್ ಇವರಿಗೆ ಸಾಂಕೇತಿಕವಾಗಿ ಹಸ್ತಾಂತರಿಸಿದು.
ಪಡುಬಿದ್ರೆ ಮತ್ತು ಬ್ರಹ್ಮಾವರಗಳಲ್ಲಿ ತಲಾ 5ರಂತೆ ಗೃಹರಕ್ಷಕ ಸಿಬ್ಬಂದಿಗಳನ್ನು ಆಯಾ ಘಟಕದ ತಹಶೀಲ್ದಾರ್‌ಅವರಲ್ಲಿ ವರದಿ ಮಾಡಿಕೊಂಡು ತುರ್ತು ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಅಲ್ಲದೇ ಜಿಲ್ಲಾಧಿಕಾರಿಗಳ ಸೂಚನೆಯಂತೆ ಪಡುಬಿದ್ರಿ, ಕಾಪು, ಮಲ್ಪೆ, ಮರವಂತೆ ಬೀಚ್‌ಗೆ ತಲಾ ಇಬ್ಬರು ಗೃಹರ್ಷಕರನ್ನು ನೇಮಕ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಿಲ್ಲೆಯ 50 ಪೊಲೀಸ್ ಠಾಣೆಗಳಲ್ಲಿ ಸರದಿ ಆಧಾರದಲ್ಲಿ ಎಪ್ರಿಲ್ ತಿಂಗಳಿನಿಂದ ಕೋವಿಡ್ ಮಾರ್ಷಲ್ ಕೆಲಸಕ್ಕೆಂದು 135 ಮಂದಿ ಗೃಹಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.
ಜೊತೆಗೆ ಉಡುಪಿ ಅಗ್ನಿಶಾಮಕ ದಳದ ಕಾರ್ಕಳ, ಕುಂದಾಪುರದಲ್ಲಿ 19, ಉಡುಪಿ ಆರ್‌ಟಿಒದಲ್ಲಿ 5, ಎನ್‌ಸಿಸಿಯಲ್ಲಿ 2 ಸರದಿ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟರಾದ ಡಾ. ಪ್ರಶಾಂತ್ ಶೆಟ್ಟಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಗೃಹರಕ್ಷಕದಳದ ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಪೂಜಾರಿ, ಕಾಪು ತಹಶೀಲ್ದಾರ್ ಪ್ರತಿಭಾ ಆರ್, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ವಸಂತ್ ಕುಮಾರ್, ಕಾಪು ಘಟಕಾಧಿಕಾರಿ ಲಕ್ಷ್ಮೀ ನಾರಾಯಣ ಹಾಗೂ ಇತರರು ಉಪಸ್ಥಿತರಿದ್ದರು.