×
Ad

ಸುಹೈಲ್ ಕಂದಕ್ ಪೊಲೀಸ್ ವಶ ಪ್ರಕರಣಕ್ಕೆ ತಾತ್ಕಾಲಿಕ ತೆರೆ

Update: 2021-06-04 23:26 IST

ಮಂಗಳೂರು, ಜೂ.4: ನಗರದ ಖಾಸಗಿ ಆಸ್ಪತ್ರೆಯೊಂದರ ಅಧಿಕಾರಿಯ ದೂರನ್ನು ಆಧರಿಸಿ ರಾಜ್ಯ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್‌ ರನ್ನು ಪೊಲೀಸರು ಮಧ್ಯಾಹ್ನ ವಶಪಡಿಸಿಕೊಂಡಿದ್ದರು. ಬಳಿಕ ಜಿಲ್ಲಾ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ತೀವ್ರ ವಿರೋಧ ಹಾಗೂ ಆಸ್ಪತ್ರೆಯ ಮುಖ್ಯಸ್ಥರು ದೂರು ಹಿಂಪಡೆಯುವುದಾಗಿ ದಿಢೀರ್ ಹೇಳಿಕೆ ನೀಡಿದ್ದರಿಂದ ಶುಕ್ರವಾರ ಸಂಜೆ ಸುಹೈಲ್ ಕಂದಕ್‌ ರನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ.

ಘಟನೆಯ ವಿವರ: ಕೆಲವು ದಿನಗಳ ಹಿಂದೆ ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದರು. ಈ ಸಂದರ್ಭ ವ್ಯಕ್ತಿಯ ಚಿಕಿತ್ಸೆಯ ಸಂಪೂರ್ಣ ಬಿಲ್ ಪಾವತಿಸದಿದ್ದರೆ ಮೃತದೇಹ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ಮುಖ್ಯಸ್ಥರು ಹೇಳಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ರಾಜ್ಯ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ನೇರ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯ ಮುಖ್ಯಸ್ಥರ ಜೊತೆ ಮಾತನಾಡಿ ಚಿಕಿತ್ಸೆಯ ಬಿಲ್ ಪಾವತಿಸದೆ ಮೃತದೇಹವನ್ನು ವಾರಸುದಾರರಿಗೆ ಬಿಟ್ಟು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ಮಧ್ಯೆ ಮೇ 18ರಂದು ಆಸ್ಪತ್ರೆಯ ಅಧಿಕಾರಿ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಸುಹೈಲ್ ಕಂದಕ್‌ರನ್ನು ಠಾಣೆಗೆ ಕರೆಯಿಸಿಕೊಂಡು ಹೇಳಿಕೆ ಪಡೆದು ಬಿಟ್ಟಿದ್ದರು.

ಹೊಸ ತಿರುವು

ನಗರದ ಕೋವಿಡ್ ಸೋಂಕಿತೆ ಗರ್ಭಿಣಿಗೆ ಸರಕಾರಿ ಮತ್ತು ಕೆಲವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಲಾಗಿದೆ ಎಂದು ಆರೋಪಿಸಿ ವೈದ್ಯರೊಬ್ಬರಿಗೆ ಗರ್ಭಿಣಿಯ ಕಡೆ ಯವರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಇದಾದ ಬಳಿಕ ಸ್ವತಃ ಗರ್ಭಿಣಿಯು ಕೆಲವು ವೈದ್ಯರು ಮತ್ತು ಆಸ್ಪತ್ರೆಗಳಿಂದ ತನಗೆ ಅನ್ಯಾಯವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು. ಅಲ್ಲದೆ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಗರ್ಭಿಣಿಯ ಆರೋಪಕ್ಕೆ ಸಂಬಂಧಿಸಿ ಶುಕ್ರವಾರ ನಗರದ ಐಎಂಎ ಹಾಲ್‌ನಲ್ಲಿ ವೈದ್ಯರು ಕೂಡ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದರು. ಅಲ್ಲದೆ ಇಂಡಿಯಾನ ಆಸ್ಪತ್ರೆಯ ಮುಖ್ಯಸ್ಥ ಡಾ.ಯೂಸುಫ್ ಕುಂಬ್ಳೆ ಮಾತನಾಡಿ, ಕೆಲವು ದಿನಗಳ ಹಿಂದೆ ನಮ್ಮಲ್ಲೂ ಇಂತಹ ಒಂದು ಘಟನೆ ನಡೆದಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಜರುಗಿಸಿಲ್ಲ ಎಂದು ಪೊಲೀಸ್ ಇಲಾಖೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಪೊಲೀಸ್ ಇಲಾಖೆಗೆ ತೀವ್ರ ಮುಜುಗರವನ್ನುಂಟು ಮಾಡಿತ್ತು.

ಸುದ್ದಿಗೋಷ್ಠಿ ಬಳಿಕ ಇಂಡಿಯಾನ ಆಸ್ಪತ್ರೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ದಾದಿಯೊಬ್ಬರು ಶುಕ್ರವಾರ ನೀಡಿದ ದೂರಿನ ಮೇರೆಗೆ ಸುಹೈಲ್ ಕಂದಕ್‌ ರನ್ನು ವಶಕ್ಕೆ ಪಡೆದು ಬಂಧನ ಪ್ರಕ್ರಿಯೆ ನಡೆಸಿತ್ತು. ವಿಷಯ ತಿಳಿದ ಮಾಜಿ ಶಾಸಕರಾದ ಐವನ್ ಡಿಸೋಜ, ಜೆ.ಆರ್.ಲೋಬೊ, ಮೊಯ್ದಿನ್ ಬಾವಾ, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮನಪಾ ವಿಪಕ್ಷ ನಾಯಕ ಎ.ಸಿ.ವಿನಯರಾಜ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಬಿ ಹ್ಯೂಮನ್ ಸಂಘಟನೆಯ ಮುಖಂಡ ಆಸೀಫ್ ಡೀಲ್ಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿ ‘ಒಂದೋ ನಮ್ಮೆನ್ನೆಲ್ಲಾ ಬಂಧಿಸಿ, ಇಲ್ಲವೇ ಸುಹೈಲ್‌ರನ್ನು ಬಿಡುಗಡೆ ಮಾಡಿ’ ಎಂದು ಒತ್ತಾಯಿಸಿದರು.

ನಾಟಕೀಯ ತಿರುವು: ಸಂಜೆಯ ವೇಳೆಗೆ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿದೆ. ಸುಹೈಲ್ ಕಂದಕ್ ವಿರುದ್ಧ ದೂರು ನೀಡಿರುವ ದಾದಿ ಸದ್ಯ ನಮ್ಮ ಆಸ್ಪತ್ರೆಯಲ್ಲಿಲ್ಲ. ಅವರು ಬಂದ ಬಳಿಕ ಮುಂದಿನ ತೀರ್ಮಾನ ಮಾಡುವೆವು. ಸುಹೈಲ್ ಕಂದಕ್ ವಿರುದ್ಧ ಈ ಹಿಂದೆ ನೀಡಿದ ದೂರನ್ನು ಹಿಂಪಡೆಯುವುದಾಗಿ ಆಸ್ಪತ್ರೆಯ ಮುಖ್ಯಸ್ಥರು ಹೇಳಿಕೆ ನೀಡಿದ ಬಳಿಕ ಪೊಲೀಸರ ವಶದಲ್ಲಿದ್ದ ಸುಹೈಲ್ ಕಂದಕ್‌ ರನ್ನು ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಪ್ರಕರಣಕ್ಕೆ ಸದ್ಯ ತೆರೆಬಿದ್ದಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಗಳ ಬಿಲ್ ದಂಧೆಯ ವಿರುದ್ಧ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಹೋರಾಟ ಮಾಡುತ್ತಾ ಬಂದಿದ್ದಾರೆ. ಇದನ್ನು ಸಹಿಸಲಾಗದ ಬಿಜೆಪಿಯು ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ ಅವರನ್ನು ವಶಕ್ಕೆ ಪಡೆಯುವಂತೆ ಮಾಡಿತ್ತು. ಎರಡೂ ಕಡೆಯ ತಪ್ಪು ಗ್ರಹಿಕೆಯಿಂದ ಹೀಗಾಗಿದೆ. ಇದೀಗ ಮಾತುಕತೆಯ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ ಎಂದು ಮಾಜಿ ಶಾಸಕರಾದ ಐವನ್ ಡಿಸೋಜ ಮತ್ತು ಜೆ.ಆರ್.ಲೋಬೊ ತಿಳಿಸಿದ್ದಾರೆ.

ವಿಶೇಷ ತನಿಖಾ ತಂಡ ರಚಿಸಲಿ: ಮಂಗಳೂರಿನ ಖಾಸಗಿ ಆಸ್ಪತ್ರೆಯ ಬಿಲ್ ದಂಧೆಯ ಬಗ್ಗೆ ಧ್ವನಿ ಎತ್ತಿರುವ ಸುಹೈಲ್ ಕಂದಕ್‌ರನ್ನು ಪೊಲೀಸರು ವಶಕ್ಕೆ ಪಡೆದದ್ದು ಖಂಡನೀಯ. ಸುಮಾರು 2 ವಾರಗಳ ಹಿಂದಿನ ಘಟನೆ ಮಾತುಕತೆ ಮೂಲಕ ಇತ್ಯರ್ಥಗೊಂಡಿದ್ದರೂ ಸುಹೈಲ್‌ ರನ್ನು ಈಗ ವಶಕ್ಕೆ ಪಡೆದದ್ದು ಯಾಕ್ಕೆ ? ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ತರಾತುರಿಯ ಕ್ರಮ ಕೈಗೊಂಡಿತೇ ? ಕೋವಿಡ್ ಸೋಂಕಿತ ಗರ್ಭಿಣಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಬಗ್ಗೆ ಸ್ವತಃ ಗರ್ಭಿಣಿ ದೂರು ನೀಡಿದ್ದರೂ ಪೊಲೀಸ್ ಇಲಾಖೆಯು ಅದನ್ನು ಯಾಕೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

ತಪ್ಪು ಗ್ರಹಿಕೆಯಿಂದ ಗೊಂದಲ ಸೃಷ್ಟಿ: ಸುಹೈಲ್ ಕಂದಕ್ ಕೋವಿಡ್ ಯೋಧರಾಗಿ ಶಕ್ತಿಮೀರಿ ದುಡಿಯುತ್ತಿದ್ದಾರೆ. ಇಂಡಿಯಾನ ಆಸ್ಪತ್ರೆ ಮತ್ತು ಸುಹೈಲ್ ಕಂದಕ್ ಮಧ್ಯೆ ತಪ್ಪು ಗ್ರಹಿಕೆಯಿಂದ ಗೊಂದಲ ಸೃಷ್ಟಿಯಾಗಿತ್ತು. ಇದೀಗ ಪ್ರಕರಣವನ್ನು ಮಾತುಕತೆಯ ಮೂಲಕ ಇತ್ಯರ್ಥ ಪಡಿಸಲಾಗಿದೆ ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಲುಕ್ಮಾನ್ ಬಂಟ್ವಾಳ ತಿಳಿಸಿದ್ದಾರೆ.

ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟ ಮಾಡುವಾಗ ಇಂತಹ ಕೆಲವು ಪ್ರಸಂಗಗಳು ಎದು ರಾಗುತ್ತವೆ. ತಪ್ಪು ಗ್ರಹಿಕೆಯಿಂದ ಎರಡೂ ಕಡೆಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು. ಎಲ್ಲದ್ದಕ್ಕೂ ಪೊಲೀಸ್ ಪ್ರಕರಣ ಪರಿಹಾರವಲ್ಲ. ಇದೀಗ ಗೊಂದಲ ನಿವಾರಣೆಯಾಗಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ತಿಳಿಸಿದ್ದಾರೆ.

ಖಂಡನೆ: ಸುಹೈಲ್ ಕಂದಕ್‌ರನ್ನು ಪೊಲೀಸರು ತರಾತುರಿಯಲ್ಲಿ ವಶಕ್ಕೆ ಪಡೆದಿರುವುದನ್ನು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್, ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಖಂಡಿಸಿದ್ದಾರೆ.

''ಕೆಲವು ವರ್ಷಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಿಲ್ ದಂಧೆ ನಡೆಯುತ್ತಿದೆ. ಕೋವಿಡ್ ಬಳಿಕವಂತೂ ಈ ದಂಧೆ ಹೆಚ್ಚಾಗ ತೊಡಗಿತ್ತು. ಕೋವಿಡ್ ಸೇವೆಯಲ್ಲಿ ಸಕ್ರಿಯನಾಗಿರುವ ನಾನು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವೆ. ಅದರಲ್ಲೂ ಖಾಸಗಿ ಆಸ್ಪತ್ರೆಯ ಬಿಲ್ ದಂಧೆಯ ಬಗ್ಗೆ ಧ್ವನಿ ಎತ್ತುತ್ತಲೇ ಬಂದಿದ್ದೇನೆ. ಅಲ್ಲದೆ ರಾಜ್ಯ ಬಿಜೆಪಿ ಸರಕಾರದ ವೈಫಲ್ಯದ ಬಗ್ಗೆ ಬಹಿರಂಗಪಡಿಸುತ್ತಿದ್ದೇನೆ. ಇದು ಸ್ಥಳೀಯ ಬಿಜೆಪಿ ನಾಯಕರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಕುಮ್ಮಕ್ಕಿನ ಮೇರೆಗೆ ಪೊಲೀಸರು ನನ್ನನ್ನು ವಶಕ್ಕೆ ಪಡೆದಿದ್ದರು''.

-ಸುಹೈಲ್ ಕಂದಕ್, ರಾಜ್ಯ ಯುವ ಕಾಂಗ್ರೆಸ್ ಮುಖಂಡ

''ಇಂಡಿಯಾನ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಅವರು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಗೆ ನೀಡಿದ್ದ ಹೇಳಿಕೆಯ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಲಾಗಿದೆ. ದೂರು ನೀಡಿದ ನರ್ಸ್‌ ಸದ್ಯ ನಮ್ಮಲ್ಲಿಲ್ಲ. ಈ ಹಿಂದಿನ ದೂರನ್ನು ವಾಪಸ್ ಪಡೆಯುವುದಾಗಿ ಅವರು ತಿಳಿಸಿದ್ದಾರೆ. ಹಾಗಾಗಿ ಬಂಧನ ಪ್ರಕ್ರಿಯೆ ಆಗಿಲ್ಲ''.

- ಶಶಿಕುಮಾರ್, ಪೊಲೀಸ್ ಆಯುಕ್ತ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News