ಪ್ರಜಾತಂತ್ರ ಪ್ರತಿಭಟನೆಯ ಸದ್ದಡಗಿಸುವ ಸರಕಾರದ ನಿಲುವು ಖಂಡನಾರ್ಹ: ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ
ಮಂಗಳೂರು, ಜೂ. 4: ರಾಜ್ಯದ ಜನತೆ ಕೋವಿಡ್ ಇದರ ಎರಡನೇ ಅಲೆಯಲ್ಲಿ ಸಿಲುಕಿ ಜೀವನ್ಮರಣದಲ್ಲಿ ಒದ್ದಾಡುತ್ತಿದ್ದರೆ, ಸಂಧರ್ಭ ಸಾಧಕತನದ ಹಲವಾರು ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುವ ಕೊರೋನ ಧೃಡಗೊಂಡ ರೋಗಿಗಳಿಂದ ಭಾರೀ ಹಣ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿರುವ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಘಟನೆಯನ್ನು ಖಂಡಿಸುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.
ಈ ಬಗ್ಗೆ ಮಾತನಾಡಿದ, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ.ಕ. ಜಿಲ್ಲಾಧ್ಯಕ್ಷ ಅಡ್ವೊಕೇಟ್ ಸರ್ಫರಾಝ್ ರವರು ಖಾಸಗಿ ಆಸ್ಪತ್ರೆಗಳ ಇಷ್ಟೊಂದು ಪ್ರಕರಣಗಳು ಮಂಗಳೂರು ನಗರದಲ್ಲಿ ಸಾಕಷ್ಟು ಬೆಳಕಿಗೆ ಬಂದಿದ್ದು, ಇತ್ತೀಚಿನ ಇಂತಹ ಘಟನೆಯೊಂದಕ್ಕೆ ಸಂಬಂಧಿಸಿ ದಂತೆ ತಾವು ಹೇಳಿದ ಅಮಿತ ಮೊತ್ತವನ್ನು ಪಾವತಿಸದಿದ್ದರೆ ಮೃತದೇಹವನ್ನು ಬಿಟ್ಟು ಕೊಡಲಾರೆವೆಂದು ಪಟ್ಟುಹಿಡಿದ ಖಾಸಗಿ ಕಾರ್ಪೊರೇಟ್ ಗಳ ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ರನ್ನು ಬಂಧಿಸಿದ್ದು, ಇದು ಖಾಸಗಿ ಉದ್ಯಮಿಗಳ ಜತೆ ಶಾಮೀಲಾಗಿರುವ ಸರಕಾರದ ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದ್ದು, ಇಷ್ಟೊಂದು ಸೇರಿದಂತೆ ಸರಕಾರದ ವಿವಿಧ ರೀತಿಯ ಜನ ವಿರೋಧಿ ನೀತಿಗೆದುರಾಗಿರುವ ಹೋರಾಟದಲ್ಲಿ ವೆಲ್ಪೇರ್ ಪಕ್ಷವು, ಇತರ ಎಲ್ಲಾ ಸಮಾನ ಮನಸ್ಕ ರಾಜಕೀಯ ಪಕ್ಷ ಮತ್ತು ಸಾಮಾಜಿಕ ಸಂಘಟನೆಗಳ ಜತೆ ಸೇರಿ ಸಕ್ರಿಯವಾಗಿ ಹೋರಾಡಲು ಸದಾ ಸನ್ನದ್ಧವಾಗಿದೆಯೆಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.