ಅಪಘಾತ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ ಐಜಿಪಿ
Update: 2021-06-05 22:28 IST
ಮಂಗಳೂರು, ಜೂ.5: ನಗರದ ಯೆಯ್ಯಡಿ ಬಳಿ ಶನಿವಾರ ಬೆಳಗ್ಗೆ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಇಬ್ಬರನ್ನು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರಾಯ್ ಖಾಸಗಿ ಆಸ್ಪತ್ರೆಗೆ ತನ್ನ ವಾಹನದಲ್ಲಿ ಕರೆದೊಯ್ದು ದಾಖಲಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಉದ್ಯೋಗಿ ಬಾಲಸುಬ್ರಹ್ಮಣ್ಯ ಹಾಗೂ ಎಂಆರ್‌ಪಿಎಲ್ ಉದ್ಯೋಗಿ ರಾಜು ಕೆ. ಯೆಯ್ಯೋಡಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ದನವೊಂದು ಏಕಾಏಕಿ ಅಡ್ಡ ಬಂದಿದೆ. ತಕ್ಷಣ ಬ್ರೇಕ್ ಹಾಕಿದಾಗ ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ. ಪರಿಣಾಮ ಇಬ್ಬರು ಸವಾರರಿಗೂ ಸಣ್ಣ ಪುಟ್ಟ ಗಾಯವಾಗಿತ್ತು.
ಈ ಸಂದರ್ಭ ಮೇರಿಹಿಲ್‌ನ ತನ್ನ ಮನೆಯಿಂದ ಕಚೇರಿಗೆ ಬರುತ್ತಿದ್ದ ಐಜಿಪಿ ಅಪಘಾತವಾದುದನ್ನು ಗಮನಿಸಿ ತಾನು ಪ್ರಯಾಣಿಸುತ್ತಿದ್ದ ಸರಕಾರಿ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.