ದಿಲ್ಲಿ, ಮುಂಬೈ, ತಮಿಳುನಾಡು,ಉತ್ತರಪ್ರದೇಶದಲ್ಲಿ ಲಾಕ್ ಡೌನ್ ಸಡಿಲಿಕೆ ಪ್ರಕ್ರಿಯೆ ಆರಂಭ

Update: 2021-06-07 07:53 GMT
photo: Financial express

ಹೊಸದಿಲ್ಲಿ: ಎರಡು ತಿಂಗಳ ಹಿಂದೆ ಕೊರೋನವೈರಸ್ ಪ್ರಕರಣದ ಎರಡನೇ ಅಲೆ ಉಲ್ಬಣಿಸಿದಾಗ ಲಾಕ್ ಡೌನ್ ಆಗಿದ್ದ ಭಾರತದ ಹಲವಾರು ಭಾಗಗಳಲ್ಲಿ ಈಗ ಎಚ್ಚರಿಕೆಯಿಂದ ಪುನರಾರಂಭಿಸುವ ಪ್ರಕ್ರಿಯೆ ಆರಂಭವಾಗಿದೆ. ಇತ್ತೀಚಿನ ವಾರಗಳಲ್ಲಿ ಕೋವಿಡ್ ಪ್ರಕರಣಗಳು ಸ್ಥಿರವಾದ ಕುಸಿತ ಕಂಡಿದ್ದರಿಂದ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ.

ದಿಲ್ಲಿಯಲ್ಲಿ, ಮಾಲ್‌ಗಳು, ಮಾರುಕಟ್ಟೆಗಳು, ಮಾರುಕಟ್ಟೆ ಸಂಕೀರ್ಣಗಳು, ಸ್ವತಂತ್ರ ಅಂಗಡಿಗಳು ಹಾಗೂ ನೆರೆಹೊರೆಯ ಅಂಗಡಿಗಳನ್ನು ಸಮ-ಬೆಸ ಹಾಗೂ  ಸಮಯದ ನಿರ್ಬಂಧಗಳೊಂದಿಗೆ ತೆರೆಯಲ್ಪಡುತ್ತವೆ. ಮೇ 10 ರಿಂದ ಸ್ಥಗಿತಗೊಂಡಿದ್ದ ದಿಲ್ಲಿ ಮೆಟ್ರೋ ಸಹ ಶೇ. 50 ರಷ್ಟು ಸಾಮರ್ಥ್ಯದೊಂದಿಗೆ ಸೇವೆಗಳನ್ನು ಪುನರಾರಂಭಿಸಲಿದೆ. ಖಾಸಗಿ ಕಚೇರಿಗಳಿಗೆ ಶೇಕಡಾ 50 ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು.

ಸೋಂಕಿನ ಪ್ರಮಾಣ ಮತ್ತು ಆಸ್ಪತ್ರೆಯ ಹಾಸಿಗೆಗೆ ಅನುಗುಣವಾಗಿ ನಿರ್ಬಂಧಗಳನ್ನು ಸರಾಗಗೊಳಿಸುವ ಐದು ಹಂತದ ಯೋಜನೆಯನ್ನು ಮಹಾರಾಷ್ಟ್ರ ಜಾರಿಗೆ ತರಲು ಮುಂದಾಗಿದೆ.

ಮುಂಬೈಯಲ್ಲಿ, ರೆಸ್ಟೋರೆಂಟ್‌ಗಳು, ಅನಿವಾರ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಹಾಗೂ  ಸಾರ್ವಜನಿಕ ಸ್ಥಳಗಳನ್ನು ಇಂದು ಮತ್ತೆ ತೆರೆಯಲು ಸಜ್ಜಾಗಿದೆ. ಆದರೆ ಮಾಲ್‌ಗಳು, ಚಿತ್ರಮಂದಿರಗಳು ಹಾಗೂ  ಮಲ್ಟಿಪ್ಲೆಕ್ಸ್‌ಗಳು 'ಅನ್ಲಾಕ್' ಯೋಜನೆಯ 3 ನೇ ಹಂತದ ಅಡಿಯಲ್ಲಿ ವರ್ಗೀಕರಿಸಲಾಗಿರುವುದರಿಂದ ಮುಚ್ಚಲ್ಪಡಲಿವೆ. ನಗರದ ಸ್ಥಳೀಯ ರೈಲುಗಳು ಅಗತ್ಯ ಕಾರ್ಮಿಕರನ್ನು ಮಾತ್ರ ಸಾಗಿಸಬಲ್ಲವು. ಬಸ್ಸುಗಳನ್ನು ಪೂರ್ಣ ಸಾಮರ್ಥ್ಯವನ್ನು ಚಲಾಯಿಸಲು ಅನುಮತಿಸಲಾಗುವುದು, ಆದರೆ ಪ್ರಯಾಣಿಕರು ಜನಸಂದಣಿಯನ್ನು ತಪ್ಪಿಸಲು ನಿಂತು ಪ್ರಯಾಣ ಮಾಡುವಂತಿಲ್ಲ.

ಸಕ್ರಿಯ ಕೋವಿಡ್-19 ಪ್ರಕರಣಗಳು 600 ಕ್ಕಿಂತ ಕಡಿಮೆಯಾದ ನಂತರ ಉತ್ತರ ಪ್ರದೇಶ ಸರ್ಕಾರವು ವಾರಣಸಿ, ಮುಝಫ್ಫರ ನಗರ, ಗೌತಮ್ ಬುದ್ಧ ನಗರ ಹಾಗೂ ಗಾಝಿಯಾಬಾದ್‌ನಲ್ಲಿರುವ ಕಂಟೈನ್‌ಮೆಂಟ್ ವಲಯಗಳ ಹೊರಗಿನ ಅಂಗಡಿಗಳು ಹಾಗೂ ಮಾರುಕಟ್ಟೆಗಳನ್ನು ಇಂದಿನಿಂದ ವಾರದಲ್ಲಿ ಐದು ದಿನಗಳವರೆಗೆ ತೆರೆಯಲು ಅನುಮತಿ ನೀಡಿದೆ.

ಹರ್ಯಾಣದಲ್ಲಿ ಜೂನ್ 14 ರವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದ್ದರೂ, ಹಲವಾರು ನಿರ್ಬಂಧಗಳನ್ನು ಸಡಿಲಿಸಲಾಗುವುದು. ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಮಾಲ್‌ಗಳನ್ನು ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ತೆರೆಯಲು ಅನುಮತಿಸಲಾಗುವುದು. ಕಾರ್ಪೊರೇಟ್ ಕಚೇರಿಗಳು ಶೇಕಡಾ 50 ಹಾಜರಾತಿಯೊಂದಿಗೆ ತೆರೆಯಬಹುದು.

ಸಿಕ್ಕಿಂನಲ್ಲಿ ದಿನಸಿ ಹಾಗೂ  ತರಕಾರಿಗಳನ್ನು ಮಾರಾಟ ಮಾಡುವ ಅಂಗಡಿಗಳು ಮತ್ತು ಹಾರ್ಡ್‌ವೇರ್ ಅಂಗಡಿಗಳು ಈಗ ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ ತೆರೆದಿರಬಹುದು,. ಆದಾಗ್ಯೂ, ರಾಜ್ಯವ್ಯಾಪಿ ಲಾಕ್ಡೌನ್ ಅನ್ನು ಜೂನ್ 14 ರವರೆಗೆ ವಿಸ್ತರಿಸಲಾಗಿದೆ.

ಜಮ್ಮು-ಕಾಶ್ಮೀರ ಆಡಳಿತವು  ಲಾಕ್‌ಡೌನ್ ಅನ್ನು ಜೂನ್ 15 ರವರೆಗೆ ವಿಸ್ತರಿಸಿದೆ. ಆದಾಗ್ಯೂ, ಸುಮಾರು ಒಂದು ತಿಂಗಳ ಲಾಕ್‌ಡೌನ್ ನಂತರ ಜಮ್ಮು ರವಿವಾರದಿಂದ ಹಂತಹಂತವಾಗಿ ತನ್ನ 'ಅನ್ಲಾಕ್' ಪ್ರಕ್ರಿಯೆಯನ್ನು ಪ್ರಾರಂಭಿಸಿತು.

ತಮಿಳುನಾಡು ತನ್ನ ಲಾಕ್‌ಡೌನ್ ಅನ್ನು ಇನ್ನೊಂದು ವಾರ ವಿಸ್ತರಿಸಿದೆ. ಕೊಯಮತ್ತೂರು ಸೇರಿದಂತೆ 11 ಹಾಟ್‌ಸ್ಪಾಟ್ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಭಾಗಗಳಲ್ಲಿ, ಸ್ವತಂತ್ರ ದಿನಸಿ ಮಳಿಗೆಗಳನ್ನು ಇಂದು ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗುವುದು. ಮನೆಗೆಲಸದ ಸಿಬ್ಬಂದಿ ಅಪಾರ್ಟ್ಮೆಂಟ್ ಹಾಗೂ  ಕಚೇರಿ ಸಂಕೀರ್ಣಗಳಿಗೆ ಹಿಂತಿರುಗಬಹುದು. ಆದರೆ ಇ-ನೋಂದಣಿ ಅಗತ್ಯವಿದೆ. ಇಬ್ಬರು ಪ್ರಯಾಣಿಕರನ್ನು ಹೊಂದಿರುವ ಆಟೊಗಳು ಮತ್ತು ಮೂವರೊಂದಿಗೆ ಕ್ಯಾಬ್‌ಗಳನ್ನು ಸಹ ಅನುಮತಿಸಲಾಗಿದೆ.

ಕೋವಿಡ್ ಸಕಾರಾತ್ಮಕತೆ ಪ್ರಮಾಣವು ಶೇಕಡಾ 5 ಕ್ಕಿಂತ ಕಡಿಮೆಯಾದ ನಂತರ ಮಾತ್ರ ನಿರ್ಬಂಧಗಳನ್ನು ಸರಾಗಗೊಳಿಸುವುದಾಗಿ ಕರ್ನಾಟಕ ಸರಕಾರ ಹೇಳಿದೆ. ರಾಜ್ಯವು ತನ್ನ ಲಾಕ್ ಡೌನ್ ಅನ್ನು ಜೂನ್ 14 ರವರೆಗೆ ವಿಸ್ತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News