ದ.ಕ. ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮ ಕಟ್ಟು ನಿಟ್ಟು: ಡಿಸಿ ಡಾ. ರಾಜೇಂದ್ರ
ಮಂಗಳೂರು, ಜೂ. 7: ದ.ಕ. ಜಿಲ್ಲೆಯಲ್ಲಿ ಪ್ರಸ್ತುತ ಕೊರೋನ ಸೋಂಕಿನ ದರ ಶೇ. 20ರಿಂದ 21ರಷ್ಟಿದ್ದು, ಅದನ್ನು ಶೇ. 5ಕ್ಕೆ ಇಳಿಸಿ ಅನ್ ಲಾಕ್ ಗೊಳಿಸುವಲ್ಲಿ ಜನರ ಸಹಕಾರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸರಕಾರದ ಆದೇಶದಂತೆ ಜೂ. 14ರವರೆಗೂ ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅನಿವಾರ್ಯವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳಿರುವ ಗ್ರಾಪಂಗಳಲ್ಲಿ ಪೂರ್ವ ನಿಗದಿತ ಮದುವೆ ಹಾಗೂ ಇತರ ಕಾರ್ಯಕ್ರಮಗಳನ್ನು ರದ್ದು ಮಾಡುವುದು ಹಾಗೂ ಹೊಸ ಕಾರ್ಯಕ್ರಮಗಳಿಗೆ ಅನುಮತಿ ನೀಡದಿರುವ ಮೂಲಕ ವಿಶೇಷ ಲಾಕ್ ಡೌನ್ ವಿಧಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಹಿರಿಯ ಅಧಿಕಾರಿಗಳ ಜತೆ ಇಂದು ಚರ್ಚಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಜನರ ಅನಗತ್ಯ ಸಂಚಾರ ತಡೆಯುವಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಲ್ಲದೆ, ಅವಧಿ ಮೀರಿ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ಮಾಡುವುದು, ಕೋವಿಡ್ ನಿಯಮ ಪಾಲನೆ ಮಾಡದಿರುವ ಕುರಿತು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನಪಾದ 10 ಫ್ಲೆಯಿಂಗ್ ಸ್ಕ್ವಾಡ್ (ವಿಚಕ್ಷಣ ದಳ) ಕಾರ್ಯ ನಿರ್ವಹಿಸಲಿವೆ. ಗ್ರಾಮಾಂತರದಲ್ಲಿ ತಾಲೂಕು ಮಟ್ಟದಲ್ಲಿ 2ರಿಂದ 3ರಷ್ಟು ವಿಚಕ್ಷಣ ತಂಡಗಳು ಕಾರ್ಯ ನಿರ್ವಹಿಸಲಿವೆ ಎಂದರು.
ಕೊರೋನ ಸೋಂಕಿತರಾದ ಸಂದರ್ಭ ಮನೆಗಳಲ್ಲಿ ಪ್ರತ್ಯೇಕ ಶೌಚಾಲಯದ ವ್ಯವಸ್ತೆ ಇಲ್ಲದಿರುವುದು, ಬಿಪಿ, ಶುಗರ್‌ನಂತಹ ಇತರ ಅನಾರೋಗ್ಯ ಸಮಸ್ಯೆಗಳಿದ್ದಲ್ಲಿ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಪಂಗಳಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಸಮಿತಿಗಳಿಗೆ ಸರಕಾರೇತರ ಸಂಸ್ಥೆಗಳ ಸದಸ್ಯರ ಸಹಕಾರದೊಂದಿಗೆ ಹೆಚ್ಚಿನ ನಿಗಾಕ್ಕೆ ಕ್ರಮ ವಹಿಸಲಾಗಿದೆ. 100ಕ್ಕೂ ಅಧಿಕ ಪ್ರಕರಣಗಳು ನೆರಿಯಾದಲ್ಲಿ, 17 ಗ್ರಾ.ಪಂ.ಗಳಲ್ಲಿ 50ಕ್ಕೂ ಅಧಿಕ ಕೊರೋನ ಪಾಸಿಟಿವ್ ಪ್ರಕರಣಗಳಿವೆ. 10 ರಿಂದ 15 ಪ್ರಕರಣಗಳು 172 ಗ್ರಾ.ಪಂ.ಗಳಲ್ಲಿ ಹಾಗೂ 10ಕಿಂತಲೂ ಕಡಿಮೆ ಪ್ರಕರಣಗಲು 147 ಗ್ರಾ.ಪಂಗಳಲ್ಲಿವೆ. ಗ್ರಾ.ಪಂ. ವ್ಯಾಪ್ತಿಯಲ್ಲಿ 31 ಕೋವಿಡ್ ಕೇರ್ ಸೆಂಟರ್‌ಗಳಿವೆ. ಕೋವಿಡ್ ಮುಕ್ತ ಗ್ರಾಮಗಳಿಗೆ ಅಭಿನಂದನಾ ಪತ್ರವನ್ನು ನೀಡಲಾಗುವುದು. 9 ಗ್ರಾಪಂಗಳಲ್ಲಿ 15 ದಿನಗಳಲ್ಲಿ ಪಾಸಿಟಿವ್ ಪ್ರಕರಣಗಳು ಕಂಡು ಬಂದಿಲ್ಲ ಎಂದು ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ತಿಳಿಸಿದರು.
ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಪೊಲೀಸ್ ಋಷಿಕೇಶ್ ಸೊನಾವಣೆ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಡಿಎಚ್‌ಒ ಡಾ. ಕಿಶೋರ್ ಕುಮಾರ್, ಗಾಯತ್ರಿ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
18-44 ವಯಸ್ಸಿವರಲ್ಲಿ ಲಸಿಕೆ ಪಡೆದವರು ಶೇ. 4.75
ದ.ಕ. ಜಿಲ್ಲೆಯಲ್ಲಿ ಜೂನ್ 6ರವರೆಗೆ 47358 ಮಂದಿ ಪ್ರಥಮ ಡೋಸ್ ಲಸಿಕೆ ಪಡೆದಿದ್ದು (ಶೇ. 90.17), 32722 ಮಂದಿ ದ್ವಿತೀಯ ಡೋಸ್ ಲಸಿಕೆ ಪಡೆದಿದ್ದಾರೆ. ಮುಂಚೂಣಿ ಕಾರ್ಯಕರ್ತರಲ್ಲಿ 12249 ಪ್ರಥಮ ಹಾಗೂ 7049 ಮಂದಿ ದ್ವಿತೀಯ ಡೋಸ್ ಲಸಿಕೆ ಪಡೆದಿದ್ದಾರೆ.
18ರಿಂದ 44 ವರ್ಷ ವಯಸ್ಸಿನ 1092144 ಮಂದಿ ಅರ್ಹರಲ್ಲಿ 51919 ಮಂದಿ ಪ್ರಥಮ ಡೋಸ್ ಪಡೆಯುವ ಮೂಲಕ ಶೇ. 4.75ರಷ್ಟು ಮಾತ್ರವೇ ಸಾಧನೆಯಾಗಿದೆ ಹಾಗೂ 118 ಮಂದಿ ದ್ವಿತೀಯ ಡೋಸ್ ಪಡೆದಿದ್ದಾರೆ. 45ರಿಂದ 60 ವರ್ಷ ವಯಸ್ಸಿನವರಲ್ಲಿ 137993 ಪ್ರಥಮ ಡೋಸ್ (ಶೇ. 33.16 ಸಾಧನೆ) ಹಾಗೂ 27314 ಮಂದಿ ದ್ವಿತೀಯ ಡೋಸ್ ಲಸಿಕೆ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ ಅರ್ಹರಲ್ಲಿ 129686 ಮಂದಿ ಪ್ರಥಮ (ಶೇ. 64.52) ಹಾಗೂ 56696 ಮಂದಿ ದ್ವಿತೀಯ ಡೋಸ್ ಲಸಿಕೆಯನ್ನು ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.