ಸುಳ್ಳು ಸುದ್ದಿಗಳನ್ನು ಹಾಗೂ ವೈದ್ಯರ ಮೇಲಿನ ಹಲ್ಲೆ ಘಟನೆಗಳನ್ನು ತಡೆಯಲು ಪ್ರಧಾನಿ ಮಧ್ಯ ಪ್ರವೇಶಿಸಬೇಕು: ಐಎಂಎ ಆಗ್ರಹ
ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕದ ಕುರಿತು ಸುಳ್ಳು ಸುದ್ದಿಗಳನ್ನು ತಡೆಯಲು ಹಾಗೂ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರ ಮೇಲಿನ ದಾಳಿ ಪ್ರಕರಣಗಳನ್ನು ತಡೆಯಲು ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರಧಾನಿ ನರೇಂದ್ರ ಮೋದಿಯನ್ನು ಆಗ್ರಹಿಸಿದೆ.
ಕೋವಿಡ್ ವಿರುದ್ಧದ ಹೋರಾಟದಲ್ಲಿ ದೇಶ 1,400ಕ್ಕೂ ಹೆಚ್ಚು ವೈದ್ಯರನ್ನು ಕಳೆದುಕೊಂಡಿದೆ ಎಂದು ವಿವರಿಸಿದ ಐಎಂಎ, ಹೀಗಿರುವಾಗ ಕೆಲ ಜನರು ಲಸಿಕೆಗಳ ಕುರಿತು ತಪ್ಪು ಮಾಹಿತಿಗಳನ್ನು ಹರಡಲು ನಡೆಸುತ್ತಿರುವ ಯತ್ನಗಳಿಂದ ತೀವ್ರ ನೋವುಂಟಾಗಿದೆ ಎಂದು ಹೇಳಿದೆ.
ಇಂತಹವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯಿದೆ, 1987, ಐಪಿಸಿ ಹಾಗೂ ವಿಪತ್ತು ನಿರ್ವಹಣಾ ಕಾಯಿದೆ, 2005 ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆ ಆಗ್ರಹಿಸಿದೆ.
ಇತ್ತೀಚೆಗೆ ಅಸ್ಸಾಂನಲ್ಲಿ ವೈದ್ಯರೊಬ್ಬರ ಮೇಲೆ ನಡೆದ ಹಲ್ಲೆ ಘಟನೆಯನ್ನು ಉಲ್ಲೇಖಿಸಿದ ಐಎಂಎ, ಪ್ರಧಾನಿ ತಕ್ಷಣ ಮಧ್ಯಪ್ರವೇಶಿಸಿ ಇಂತಹ ಘಟನೆಗಳನ್ನು ತಡೆಯಬೇಕು ಎಂದು ಹೇಳಿದೆ.
ಈಗಿರುವ ಲಸಿಕೆ ನೀತಿಯ ಬದಲು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಒದಗಿಸಲು ಸರಕಾರ ಶ್ರಮಿಸಬೇಕು ಎಂದೂ ಐಎಂಎ ಆಗ್ರಹಿಸಿದೆ.
"ನಿಮ್ಮಂತಹ ಬಲಿಷ್ಠ ನಾಯಕರು ಈ ಲಸಿಕೆ ಕಾರ್ಯಕ್ರಮವನ್ನು ಮುನ್ನಡೆಸಿದಾಗ ಅದರ ಪೂರ್ಣ ಪ್ರಯೋಜನ ಎಲ್ಲರಿಗೂ ತಲುಪುತ್ತದೆ ಎಂದು ನಾವು ನಂಬಿದ್ದೇವೆ" ಎಂದು ಸಂಸ್ಥೆ ಹೇಳಿದೆ.
"ಕೋವಿಡ್ ರೋಗಿಗಳನ್ನು ಕಾಡುತ್ತಿರುವ ಮ್ಯುಕೋರ್ಮೈಕೋಸಿಸ್ ಫಂಗಲ್ ಸೋಂಕಿಗೆ ಔಷಧಿ ಸುಲಭವಾಗಿ ದೊರೆಯುತ್ತಿಲ್ಲ, ಈ ಸೋಂಕಿನ ಚಿಕಿತ್ಸೆಗೆ ಪ್ರತ್ಯೇಕ ಸಂಶೋಧನಾ ಘಟಕ ಸ್ಥಾಪಿಸಿ ಚಿಕಿತ್ಸೆಗಾಗಿ ಸೂಕ್ತ ಮಾರ್ಗಸೂಚಿಗಳು ಲಭಿಸುವಂತೆ ಮಾಡಬೇಕು" ಎಂದೂ ಐಎಂಎ ವಿನಂತಿಸಿದೆ.