×
Ad

‘ಜೀವ ಮತ್ತು ಜೀವನ’ವನ್ನು ಉಳಿಸಲು ಆಗ್ರಹ; ಆದಿವಾಸಿಗಳಿಂದ ವಾದ್ಯ ನುಡಿಸಿ, ಖಾಲಿ ತಟ್ಟೆ ಪ್ರದರ್ಶಿಸಿ ಪ್ರತಿಭಟನೆ

Update: 2021-06-07 19:27 IST

ಉಡುಪಿ, ಜೂ.7: ಕರ್ನಾಟಕದ ಆದಿವಾಸಿಗಳು ಕೊರೋನ ಸಾಂಕ್ರಾಮಿಕ ರೋಗದ ಸಂಕಷ್ಟಗಳ ಹಿನ್ನೆಲೆಯಲ್ಲಿ ತಮ್ಮ ’ಜೀವ ಮತ್ತು ಜೀವನ’ವನ್ನು ಉಳಿಸಲು ಆಗ್ರಹಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲಾ ಸಂಘಟನಾ ಸಮಿತಿ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಆದಿವಾಸಿಗಳು ತಮ್ಮ ಮನೆಗಳ ಮುಂದೆ ನಿಂತು ಅವರ ಸಾಂಪ್ರದಾಯಿಕ ವಾದ್ಯಗಳನ್ನು ನುಡಿಸಿ ಮತ್ತು ಖಾಲಿ ತಟ್ಟೆಗಳನ್ನು ಪ್ರದರ್ಶಿಸುವುದರ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು. ಆದಿವಾಸಿಗಳು ವಾಸಿಸುವ ಪ್ರದೇಶಗಳಿಗೆ ಜೀವನಾವಶ್ಯಕ ರೇಷನ್ ಮತ್ತು ಪೌಷ್ಟಿಕ ಆಹಾರ ಒದಗಿಸಬೇಕು. ಪ್ರತಿ ಕುಟುಂಬಕ್ಕೆ 10,000ರೂ. ಪರಿಹಾರ ಧನ ನೀಡಬೇಕು. ಆಹಾರ, ಅಗತ್ಯ ಔಷಧಿ ಚಿಕಿತ್ಸೆ, ಎಲ್ಲಾ ಆದಿವಾಸಿಗಳಿಗೆ ಉಚಿತ ಲಸಿಕೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ಉಡುಪಿ ಜಿಲ್ಲೆಯ ಕೊರಗ ಸಮುದಾಯದ ನಿರುದ್ಯೋಗಿ ಯುವಜನರಿಗೆ ಬಾಕಿಯಾಗಿರುವ 2020-21 ನೇ ಸಾಲಿನ ನಿರುದ್ಯೋಗ ಭತ್ಯೆಯನ್ನು ಕೂಡಲೇ ಅವರ ಖಾತೆಗಳಿಗೆ ನೇರವಾಗಿ ನೀಡಬೇಕು. ಜಿಲ್ಲೆಯ ಹಸಲ( ಹಸಲರು) ಸಮುದಾಯಗಳಿಗೆ ಉಚಿತ ಪೌಷ್ಟಿಕ ಆಹಾರ ಯೋಜನೆಯನ್ನು ವಿಸ್ತರಿಸಿ ಜಾರಿಗೊಳಿಸಬೇಕು. ಜಿಲ್ಲೆಯ ಕೊರಗ, ಮಲೆಕುಡಿಯ, ಹಸಲ,ಮರಾಠಿ ನಾಯಕ ಸಮುದಾಯಗಳಿಗೆ ಮೊದಲ ಆದ್ಯತೆಯಲ್ಲಿ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡಲು ಕ್ರಮವಹಿಸಬೇಕೆಂದು ಪ್ರತಿಭಟನ ಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಸಂಚಾಲಕ ಶ್ರೀಧರ್ ನಾಡ, ಸಹ ಸಂಚಾಲಕರಾದ ಗಣೇಶ್ ಆಲೂರು, ದೀಪಾ ಜಪ್ತಿ, ಜಲಜ ಕೆರಾಡಿ, ಮೂರ್ತಿ ಕಬಿನಾಲೆ, ಸುಧಾಕರ ಕಾರೆಬೈಲು, ಸಂಜು ಕಾರೆಬೈಲು, ಮುಖಂಡರಾದ ಸಾಧು ನಾರ್ಕಳಿ, ನಾಗೇಶ ಕಬ್ಬಿ ನಾಲೆ, ಪ್ರಕಾಶ ಕೊಲ್ಲೂರು, ಮಹದೇವ ಕೊಲ್ಲೂರು. ಪ್ರಭಾಕರ ನಾಡ, ಮಂಜುನಾಥ ಕಟಬ್ಯಾಲ್ತುರು ಮೊದಲಾದವರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News