ಕೋಟತಟ್ಟು: 28 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆ

Update: 2021-06-07 13:59 GMT

ಕೋಟ, ಜೂ.7: ಕೋಟತಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ಈವರೆಗೆ ಒಟ್ಟು 28 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

 ಸೋಮವಾರ ಒಂದೇ ದಿನ ಒಟ್ಟು ಆರು ಪ್ರಕರಣಗಳು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಒಟ್ಟು ನಾಲ್ಕು ಮನೆಗಳನ್ನು ಸೀಲ್‌ ಡೌನ್ ಮಾಡಲಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಾ ಎಸ್.ಪೂಜಾರಿ ತಿಳಿಸಿದರು.

ಮುಂಜಾಗ್ರತಾ ಕ್ರಮವಾಗಿ ಕೋಟತಟ್ಟು ಗ್ರಾಪಂ ಕಾರ್ಯಪಡೆಯು ಕೆಲಸ ಮಾಡುತ್ತಿದ್ದು, ಆಶಾ ಕಾರ್ಯಕರ್ತೆಯರು ಈ ಗ್ರಾಮದ ಪ್ರತಿಯೊಬ್ಬರ ಮನೆ ಮನೆಗೆ ಭೇಟಿ ನೀಡಿ ಅವರ ಮೂಗು ಮತ್ತು ಗಂಟಲು ದ್ರವವನ್ನು ಪರೀಕ್ಷೆ ಮಾಡುತ್ತಿದ್ದಾರೆ. ಪಾಸಿಟಿವ್ ಬಂದ ಮನೆಯವರಿಗೆ ಹೊರಗಡೆ ತಿರುಗಾಡದಂತೆ ಎಚ್ಚರಿಕೆ ನೀಡಿ ಮನೆಯನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ಆ ಮನೆಯ ವರಿಗೆ ಅಗತ್ಯ ವಸ್ತುಗಳ ಖರೀದಿಗೆ ನಮ್ಮ ಕಾರ್ಯಪಡೆ ಹಾಗೂ ಆಶಾ ಕಾರ್ಯಕರ್ತೆಯರು ಸಹಕರಿಸುತ್ತಿದ್ದಾರೆ ಎಂದರು.

ಕಾರ್ಯಪಡೆ ಸಭೆ: ಕೋಟತಟ್ಟು ಗ್ರಾಮೀಣ ಕಾರ್ಯಪಡೆ ಸಭೆಯು ಗ್ರಾಪಂ ಅಧ್ಯಕ್ಷೆ ಅಶ್ವಿನಿ ಅಧ್ಯಕ್ಷತೆಯಲ್ಲಿ ಸೋಮವಾರ ಕೋಟ ತಟ್ಟು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಾ ಎಸ್ ಪೂಜಾರಿ ಸಮಗ್ರ ಮಾಹಿತಿ ನೀಡಿದರು. ವಿಶೇಷ ಚೇತನರಿಗೆ ಕೋರೋನ ಲಸಿಕೆ ನೀಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಚರ್ಚಿಸಲಾಯಿತು.

ಸಭೆಯಲ್ಲಿ ನೋಡಲ್ ಅಧಿಕಾರಿ ಅರುಣ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ವಾಸು ಪೂಜಾರಿ, ಸದಸ್ಯರಾದ ಸತೀಶ್ ಬಾರಿಕೆರೆ, ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ, ರಾಬರ್ಟ್ ರೊಡ್ರಿಗಸ್, ಸಾಹಿರ ಬಾನು, ಜ್ಯೋತಿ, ವಿದ್ಯಾ, ಪೂಜಾ, ಗ್ರಾಮ ಲೆಕ್ಕಾಧಿಕಾರಿ ಚೆಲುವರಾಜು, ಪೊಲೀಸ್ ಸಿಬ್ಬಂದಿ ಮೋಹನ್ ಕೊತ್ವಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News