ಸವಿತಾ ಸಮಾಜ ವತಿಯಿಂದ 600 ಕ್ಷೌರಿಕ ವೃತ್ತಿಯವರಿಗೆ ಕಿಟ್ ವಿತರಣೆ
ಉಡುಪಿ, ಜೂ.7: ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ವತಿಯಿಂದ ಜಿಲ್ಲೆಯ ಸುಮಾರು 600 ಕ್ಷೌರಿಕ ವೃತ್ತಿಬಾಂಧವರಿಗೆ 6 ಲಕ್ಷ ವೆಚ್ಚದಲ್ಲಿ ಆಹಾರ ಹಾಗೂ ಸೆಲೂನ್ ಸಾಮಾಗ್ರಿಗಳ ಕಿಟ್ಗಳ ವಿತರಣಾ ಕಾರ್ಯಕ್ರಮಕ್ಕೆ ಇಂದು ಅಂಬಲಪಾಡಿಯ ಸವಿತಾ ಸಮುದಾಯ ಭವನದಲ್ಲಿ ಚಾಲನೆ ನೀಡಲಾಯಿತು.
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಫಲಾನುಭವಿಗಳಿಗೆ ಆಹಾರ ಕಿಟ್ ವಿತರಿಸಿದರು. ಮುಖ್ಯ ಅತಿಥಿಯಾಗಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಮಾತನಾಡಿದರು.
ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ಮಾತನಾಡಿ, ಈ ಬಾರಿ ಆಹಾರ ಕಿಟ್ ನೀಡುವುದರೊಂದಿಗೆ ಸೊಸೈಟಿಯಲ್ಲಿ 6ತಿಂಗಳ ನಿಬಡ್ಡಿ ಸಾಲ ಸೌಲಭ್ಯ ಕೊರೋನ ಪೀಡಿತರಿಗೆ ಸಹಾಯಧನ ಹಾಗೆ ಹಲ ವಾರು ಕಡಿಮೆ ಬಡ್ಡಿದರದ ಸಾಲ ಸೌಲಭ್ಯಗಳನ್ನು ನೀಡಲಾಗುವುದು ಎಂದರು
ಉಡುಪಿ ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ವಿಶ್ವನಾಥ್ ಭಂಡಾರಿ ನಿಂಜೂರು, ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿ ಉಪಾಧ್ಯಕ್ಷೆ ಬನ್ನಂಜೆ ಗೋವಿಂದ ಭಂಡಾರಿ, ಜಿಲ್ಲಾ ಸವಿತಾ ಸಮಾಜ ಕೋಶಾಧಿಕಾರಿ ಶೇಖರ್ ಸಾಲ್ಯಾನ್ ಆದಿ ಉಡುಪಿ, ಉಡುಪಿ ತಾಲೂಕು ಸವಿತಾ ಸಮಾಜ ಅಧ್ಯಕ್ಷ ರಾಜು ಭಂಡಾರಿ ಕಿನ್ನಿಮೂಲ್ಕಿ, ಸಹಕಾರಿ ನಿರ್ದೇಶಕ ಗಂಗಾಧರ ಭಂಡಾರಿ ಬಿರ್ತಿ ಮೊದಲಾದವರು ಉಪಸ್ಥಿತರಿದ್ದರು. ನಿರ್ದೇಶಕ ಸದಾಶಿವ ಬಂಗೇರ ಕುರ್ಕಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.