ತುರ್ತು ಪರಿಸ್ಥಿತಿಗಳ ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಿ: ಅಧಿಕಾರಿಗಳಿಗೆ ದ.ಕ. ಡಿಸಿ ಸೂಚನೆ
ಮಂಗಳೂರು, ಜೂ. 7: ಪ್ರವಾಹ, ಅತಿವೃಷ್ಟಿ ಸಹಿತ ತುರ್ತು ಸಂದರ್ಭದಲ್ಲಿ ಜನರ ರಕ್ಷಣೆ ಹಾಗೂ ಪುನರ್ವಸತಿಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತನ್ನ ಅಧೀನ ಅಧಿಕಾರಿ ಗಳಿಗೆ ಸೂಚಿಸಿದರು.
ಮಂಗಾರು ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಬೇಕಾದ ಪೂರ್ವ ಸಿದ್ಧತಾ ಕ್ರಮಗಳ ಕುರಿತು ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಗಾರು ಮಳೆಯು ತೀವ್ರಗೊಂಡು ಜಿಲ್ಲೆಯಲ್ಲಿ ಯಾವುದೇ ಪ್ರಾಣ ಹಾನಿಯಾಗದಂತೆ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿ, ಖಾಸಗಿ ಸೊತ್ತುಗಳಿಗೆ ಹಾನಿ ಉಂಟಾಗದಂತೆ ಎಲ್ಲಾ ರೀತಿಯ ಸಿದ್ಧತೆ ನಡೆಸಬೇಕು. ಜೂ.14ರ ಬಳಿಕ ಮುಂಗಾರು ಮಳೆ ಯಾಗುವ ಸಾಧ್ಯತೆ ಇದೆ. ಮಳೆ ಹಾನಿಗೊಳಗಾದ ಕುಟುಂಬಗಳಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಒದಗಿಸಬೇಕು.ಅಂತಹ ಸಂದರ್ಭದಲ್ಲಿ ಯಾವುದೇ ಅರ್ಹ ವ್ಯಕ್ತಿಯು ಪರಿಹಾರದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಮಳೆಯಿಂದ ತೊಂದರೆಗೊಳಗಾಗುವ ಸಾಧ್ಯತೆ ಕಂಡುಬಂದ ತಕ್ಷಣ ಅಂತಹ ಕುಟುಂಬಗಳನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಬೇಕು.ಅವರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕೋವಿಡ್ ಸೋಂಕಿತರಿದ್ದಲ್ಲಿ ಅವರನ್ನು ಕೂಡ ಕಡ್ಡಾಯವಾಗಿ ಕೋವಿಡ್‌ಕೇರ್ ಸೆಂಟರ್‌ಗಳಿಗೆ ಸೇರಿಸಬೇಕು ಎಂದರು.
ಹೋಮ್‌ಗಾರ್ಡ್ ಕಮಾಂಡೆಂಟ್ ಸಮುದ್ರದ ತೀರದ ಜವಾಬ್ದಾರಿಯನ್ನು ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ನೆರೆ ಹಾವಳಿಯ ಕುರಿತು ಅಣಕು ಪ್ರದರ್ಶನಗಳನ್ನು ಮಾಡುವ ಮೂಲಕ ಜನ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಒಳ ಚರಂಡಿಗಳು ಮತ್ತು ಹೊಂಡಗಳ ಹೂಳೆತ್ತಬೇಕು. ಮಳೆ ನೀರು ತುಂಬಿ ಚರಂಡಿಯ ಅಕ್ಕಪಕ್ಕದ ಮನೆಯೊಳಗೆ ನೀರು ನುಗ್ಗದಂತೆ ನೋಡಿಕೊಳ್ಳಬೇಕು ಎಂದ ಡಿಸಿ, ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ವಿಪತ್ತು ನಿರ್ವಹಣಾ ನೋಡಲ್ ಅಧಿಕಾರಿಗಳು ನೆರೆಹಾವಳಿಯಿಂದ ಹಾನಿಗೊಳಗಾಗುವ ಪ್ರದೇಶಗಳನ್ನು ಗುರುತಿಸಿ, ನೆರೆ ಹಾವಳಿಯಾದಾಗ ಅಲ್ಲಿ ವಾಸಿಸುವ ಕುಟುಂಬಗಳನ್ನು ಆದಷ್ಟು ಶೀಘ್ರವಾಗಿ ಕಾಳಜಿ ಕೇಂದ್ರಗಳಿಗೆ ವರ್ಗಾಯಿಸ ಬೇಕು ಎಂದರು.
ಅರಣ್ಯ ಮತ್ತು ಮೆಸ್ಕಾಂ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದ ಡಿಸಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿ ಗಳು ಮಳೆಹಾನಿಗೊಳಗಾದ ಕೃಷಿ ಭೂಮಿಯ ಬಗ್ಗೆ ಜಿಲ್ಲಾಡಳಿತಕ್ಕೆ ಪ್ರತಿದಿನ ವರದಿ ನೀಡಬೇಕು ಎಂದು ಡಿಸಿ ಸೂಚಿಸಿದರು.
ಸಭೆಯಲ್ಲಿ ದ.ಕ.ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ, ಪ್ರೊಬೆೆಷನರಿ ಐಎಎಸ್ ಅಧಿಕಾರಿ ಅಕ್ರಮ್ ಷಾ, ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಡಿಸಿಪಿ ಹರಿರಾಂ ಶಂಕರ್, ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ನಗರಾಭಿವೃದ್ಧಿ ಯೋಜನಾ ಕೋಶದ ನಿರ್ದೇಶಕಿ ಗಾಯತ್ರಿ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿ ಡಾ. ಕಿಶೋರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪಂಪ್‌ವೆಲ್ ವೃತ್ತ ಹಾಗೂ ತೊಕ್ಕೊಟ್ಟು ರಸ್ತೆಯ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗದಂತೆ ನೀರನ್ನು ತಕ್ಷಣ ಅಲ್ಲಿಂದ ಸಾಗಿಸಲು ಅಗತ್ಯವಿರುವ ಪಂಪ್‌ಗಳ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಡಿಸಿ ಸೂಚನೆ ನೀಡಿದರು.