ಉಡುಪಿ: ಕೋವಿಡ್ ಗೆ ಇಬ್ಬರು ಬಲಿ, 394 ಮಂದಿಗೆ ಕೊರೋನ ಪಾಸಿಟಿವ್
ಉಡುಪಿ, ಜೂ.7: ಜಿಲ್ಲೆಯಲ್ಲಿ ಕೊರೋನ ಎರಡನೇ ಅಲೆ ಇಳಿಮುಖದತ್ತ ಸಾಗಿದ್ದು ಎಪ್ರಿಲ್ 25ರ ಬಳಿಕ ಮೊದಲ ಬಾರಿಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 400ಕ್ಕಿಂತ ಕೆಳಗಿಳಿದಿದ್ದು, ಸೋಮವಾರ ಇದು 394 ಆಗಿದೆ. ಇಂದು ಸಹ ಕೊರೋನಕ್ಕೆ ಇಬ್ಬರು ಮೃತಪಟ್ಟಿದ್ದಾರೆ. ದಿನದಲ್ಲಿ 628 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದು, ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 4085 ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಸೋಮವಾರ ಕುಂದಾಪುರ ತಾಲೂಕಿನ 85 ವರ್ಷ ಪ್ರಾಯದ ಮಹಿಳೆ ಹಾಗೂ 61 ವರ್ಷ ಪ್ರಾಯದ ಪುರುಷ ಖಾಸಗಿ ಆಸ್ಪತ್ರೆ ಗಳಲ್ಲಿ ರವಿವಾರ ಮೃತಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಮೃತರ ಸಂಖ್ಯೆ 346ಕ್ಕೇರಿದೆ. ಇಬ್ಬರೂ ಕೊರೋನ ಲಕ್ಷಣ ದೊಂದಿಗೆ ಉಸಿರಾಟದ ತೊಂದರೆ ಹಾಗೂ ನ್ಯುಮೋನಿಯಾ ಚಿಕಿತ್ಸೆಗೆ ದಾಖಲಾಗಿದ್ದರು.
ರವಿವಾರ ಪಾಸಿಟಿವ್ ಬಂದ 394 ಮಂದಿಯಲ್ಲಿ 200 ಮಂದಿ ಪುರುಷರು ಹಾಗೂ 194 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 207, ಕುಂದಾಪುರ ತಾಲೂಕಿನ 110 ಹಾಗೂ ಕಾರ್ಕಳ ತಾಲೂಕಿನ 70 ಮಂದಿ ಇದ್ದು, ಉಳಿದ ಏಳು ಮಂದಿ ಹೊರ ಜಿಲ್ಲೆಯವರು. ಇವರಲ್ಲಿ 23 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 371 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯು ತಿದ್ದಾರೆ.
ನಿನ್ನೆ ಒಟ್ಟು 628 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 58,248ಕ್ಕೇರಿದೆ. ನಿನ್ನೆ ಜಿಲ್ಲೆಯ 3374 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 62,679 ಆಗಿದೆ ಎಂದು ಡಾ. ಉಡುಪ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,16,622 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಕುಂದಾಪುರದ ವ್ಯಕ್ತಿಯಲ್ಲಿ ಕಪ್ಪು ಶಿಲೀಂದ್ರ ಸೋಂಕು
ಕುಂದಾಪುರ ತಾಲೂಕು ಹೆರಂಜಾಲಿನ 42 ವರ್ಷ ಪ್ರಾಯದ ವ್ಯಕ್ತಿಯೊಬ್ಬರಲ್ಲಿ ಕಪ್ಪು ಶಿಲೀಂದ್ರದ ಸೋಂಕು ಕಂಡು ಬಂದಿದ್ದು, ಅವರು ಇಂದು ಚಿಕಿತ್ಸೆಗೆಂದು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಹತ್ತು ಮಂದಿ ಕಪ್ಪು ಶಿಲೀಂದ್ರ ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ. ಇವರಲ್ಲಿ ಜಿಲ್ಲೆಯ ಇಬ್ಬರು ಹಾಗೂ ಹೊರಜಿಲ್ಲೆಯ ಏಳು ಮಂದಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಹಾಗೂ ಒಬ್ಬರು ಜಿಲ್ಲಾಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಆರು ಮಂದಿ ಚಿಕಿತ್ಸೆಯ ಬಳಿಕ ಗುಣಮುಖ ರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ ಎಂದು ಡಿಎಚ್‌ಓ ಡಾ. ಉಡುಪ ತಿಳಿಸಿದ್ದಾರೆ.
ದಿನದಲ್ಲಿ 5435 ಮಂದಿಗೆ ಲಸಿಕೆ
ಉಡುಪಿ ಜಿಲ್ಲೆಯಲ್ಲಿ ಸೋಮವಾರ 5435 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 4913 ಮಂದಿ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದರೆ, 522 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು 18ರಿಂದ 44 ವರ್ಷದೊಳಗಿನ 2647 ಮಂದಿ ಮೊದಲ ಡೋಸ್‌ನ್ನು ಪಡೆದಿದ್ದಾರೆ. 45 ವರ್ಷ ಮೇಲಿನ 2194 ಮಂದಿ ಮೊದಲ ಡೋಸ್ ಹಾಗೂ 507 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ. 23 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 64 ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಇಂದು ಲಸಿಕೆ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ 2,75,137 ಮಂದಿ ಲಸಿಕೆಯ ಮೊದಲ ಡೋಸ್‌ನ್ನು ಪಡೆದರೆ, 87,284 ಮಂದಿ ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ ಎಂದು ಡಾ.ಉಡುಪ ತಿಳಿಸಿದರು.