ಯಡಮೊಗೆ ಉದಯ ಗಾಣಿಗ ಕೊಲೆ ಪ್ರಕರಣ: ಬಿಜೆಪಿ ಮುಖಂಡ ಸೇರಿದಂತೆ ಮತ್ತಿಬ್ಬರ ಬಂಧನ

Update: 2021-06-07 16:13 GMT
ಬಾಲಚಂದ್ರ

ಶಂಕರನಾರಾಯಣ, ಜೂ.7: ಯಡಮೊಗೆ ಗ್ರಾಪಂ ವ್ಯಾಪ್ತಿಯ ಹೊಸಬಾಳು ಉದಯ ಕುಮಾರ್ ಗಾಣಿಗ(40) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೇರಿದಂತೆ ಮತ್ತಿಬ್ಬರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್ ಅಗ್ರಹಾರ ಹಾಗೂ ಯಡಮೊಗೆ ನಿವಾಸಿ ರಾಜೇಶ್ ಭಟ್ ಬಂಧಿತ ಆರೋಪಿಗಳು. ಈ ಕೊಲೆ ಪ್ರಕರಣದಲ್ಲಿ ರಾಜೇಶ್ ಭಟ್ ನೇರವಾಗಿ ಭಾಗಿಯಾಗಿರುವುದಾಗಿ ಮತ್ತು ಬಾಲಚಂದ್ರ ಭಟ್ ಅಗ್ರಹಾರ ಕೊಲೆಗೆ ಕುಮ್ಮಕ್ಕು ನೀಡಿರುವುದಾಗಿ ಮೃತರ ಪತ್ನಿ ಜ್ಯೋತಿ ಗಾಣಿಗ ನೀಡಿರುವ ದೂರಿನಲ್ಲಿ ತಿಳಿಸಿದ್ದರು.

ಕೊಲೆ ನಡೆದ ಬಳಿಕ ಇವರಿಬ್ಬರು ತಲೆಮರೆಸಿಕೊಂಡಿದ್ದರು. ಈ ಕುರಿತು ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಈ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೃತ್ಯದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ಶಂಕೆ ಇದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಈಗಾಗಲೇ ಬಂಧಿತರಾಗಿರುವ ಪ್ರಮುಖ ಆರೋಪಿ ಯಡಮೊಗೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳನನ್ನು ಪೊಲೀಸರು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ಕೊಳವೆ ಬಾವಿಗೆ ಎನ್‌ಓಸಿ ನೀಡುವ ವಿಚಾರ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ವಿಧಿಸಿರುವ ಸಂಪೂರ್ಣ ಲಾಕ್‌ಡೌನ್ ವಿರುದ್ಧದ ವಾಟ್ಸಾಪ್ ಸ್ಟೇಟಸ್‌ನ ಧ್ವೇಷದಲ್ಲಿ ಗ್ರಾಪಂ ಅಧ್ಯಕ್ಷರ ನೇತೃತ್ವ ತಂಡ ಜೂ.5ರಂದು ರಾತ್ರಿ ವೇಳೆ ಉದಯ ಗಾಣಿಗ ಅವರಿಗೆ ಕಾರು ಢಿಕ್ಕಿ ಹೊಡೆಸಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿತ್ತು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಡಮೊಗೆಗೆ ಎಸ್ಪಿ ವಿಷ್ಣುವರ್ಧನ್ ಭೇಟಿ

ಕೊಲೆ ನಡೆದ ಯಡಮೊಗೆ ಹೊಸಬಾಳು ಎಂಬಲ್ಲಿಗೆ ಇಂದು ಭೇಟಿ ನೀಡಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಪ್ರಕರಣದ ತನಿಖೆ ನಡೆಯುತ್ತಿದ್ದು, ಮತ್ತೆ ಇಬ್ಬರನ್ನು ಬಂಧಿಸಲಾಗಿದೆ. ಇವರನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪ್ರಾಣೇಶ್ ಯಡಿಯಾಳನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೃತರ ಮರಣೋತ್ತರ ಪರೀಕ್ಷೆಯ ಬಂದ ನಂತರ ಮತ್ತೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News