ಕುಂಭಾಶಿ: ಅಪರಿಚಿತ ವ್ಯಕ್ತಿಯಿಂದ ಕೊಲೆಗೆ ಯತ್ನ
Update: 2021-06-07 21:45 IST
ಕುಂದಾಪುರ, ಜೂ.7: ಅಪರಿಚಿತ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಕುಂಭಾಶಿ ಕೊರವಡಿ ವಿಷ್ಣುಮೂರ್ತಿ ದೇವಸ್ಥಾನ ಹತ್ತಿರ ಜೂ.6ರಂದು ರಾತ್ರಿ 10.45ರ ಸುಮಾರಿಗೆ ನಡೆದಿದೆ.
ಗಾಯಗೊಂಡವರನ್ನು ಕೊರವಡಿ ಎನ್.ನಾಗರಾಜ್ ರಾವ್(75) ಎಂದು ಗುರುತಿಸಲಾಗಿದೆ. ಇವರು ಮನೆಯ ನಾಯಿಯನ್ನು ಕಂಪೌಂಡ್ ಒಳಗಡೆ ಸುತ್ತಾಡಿಸಲು ಅಂಗಳಕ್ಕೆ ಹೋಗುತ್ತಿರುವಾಗ ಸುಮಾರು 30-35 ವರ್ಷ ಪ್ರಾಯದ ಎಣ್ಣೆಗಪ್ಪು ಮೈ ಬಣ್ಣದ ಅಪರಿಚಿತ ವ್ಯಕ್ತಿಯು ಏಕಾಏಕಿಯಾಗಿ ಆತನ ಕೈಯಲ್ಲಿದ್ದ ಹರಿತವಾದ ಚಾಕುವನ್ನು ತೋರಿಸಿದನು.
ಆಗ ನಾಗರಾಜ್ ರಾವ್ ವಿಚಾರಿಸುವಾಗ ಆತನು ಕೊಲೆ ಮಾಡುವ ಉದ್ದೇಶದಿಂದಲೇ ನಾಗರಾಜ್ ರಾವ್ ಅವರ ಗಲ್ಲಕ್ಕೆ ಹಾಗೂ ಕೈಗೆ ಚೂರಿ ಯಿಂದ ಇರಿದು ಪರಾರಿಯಾದನು. ಇದರಿಂದ ಗಾಯಗೊಂಡ ನಾಗರಾಜ್ ರಾವ್ ಮಣಿಪಾಲ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.