40 ಗ್ರಾಪಂಗಳಲ್ಲಿ ಲಾಕ್‌ಡೌನ್ ಸಡಿಲಿಕೆ: ಎಲ್ಲೆಡೆ ಜನಸಂದಣಿ
ಉಡುಪಿ, ಜೂ. 7: ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಿರುವ ಒಟ್ಟು 40 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎರಡು ದಿನಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದ್ದು, ಅದರಂತೆ ಸೋಮವಾರ ಈ ಗ್ರಾಪಂ ವ್ಯಾಪ್ತಿಯ ಜನತೆ ಬೆಳಗ್ಗೆ 6ಗಂಟೆಯಿಂದ 10ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿಸಿ ಕೊಂಡರು. ಇದರಿಂದ ಎಲ್ಲ ಕಡೆಗಳಲ್ಲಿ ಜನಸಂದಣಿ ಕಂಡುಬಂತು.
ಕೋಟೇಶ್ವರ, ಶಿರೂರು, ಶಿರ್ವ, ಪಡುಬಿದ್ರೆ ಸೇರಿದಂತೆ 33 ಗ್ರಾಪಂಗಳಲ್ಲಿ ಐದು ದಿನಗಳ ಮತ್ತು ಉಳಿದ ಏಳು ಗ್ರಾಪಂಗಳಲ್ಲಿ ಮೂರು ದಿನಗಳ ಸಂಪೂರ್ಣ ಲಾಕ್‌ಡೌನ್ ರವಿವಾರ ಪೂರ್ಣಗೊಂಡಿದೆ. ಆದುದರಿಂದ ಈ ಗ್ರಾಪಂ ವ್ಯಾಪ್ತಿಯ ಜನತೆಗೆ ಜಿಲ್ಲಾಡಳಿತ ಸೋಮವಾರ ಮತ್ತು ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಸಡಿಲಿಕೆ ಮಾಡಿದೆ.
ಈ ಗ್ರಾಪಂಗಳಲ್ಲಿ ಮತ್ತೆ ಲಾಕ್‌ಡೌನ್ ಮುಂದುವರೆಸಬೇಕೆ ಎಂಬುದರ ಬಗ್ಗೆ ಜೂ.8ರಂದು ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ್ದರು. ಅದರಿಂದಾಗಿ ಜನರು ಮತ್ತೆ ಪೂರ್ಣ ಲಾಕ್‌ಡೌನ್ ಆಗುವ ಭೀತಿಯಲ್ಲಿ ಪೇಟೆಗೆ ಆಗಮಿಸಿ ತಮಗೆ ಬೇಕಾ ಅಗತ್ಯ ವಸ್ತುಗಳ ಖರೀದಿಸಿದರು.
ಪಡುಬಿದ್ರಿ ಪೇಟೆಯಲ್ಲಿ ಜನಸಂದಣಿ ನಿಯಂತ್ರಿಸುವ ಸಲುವಾಗಿ ಗ್ರಾಪಂ ಸಾಕಷ್ಟು ಮುಂಜಾಗ್ರತಾ ಕ್ರಮಕೈಗೊಂಡಿದೆ. ಪೊಲೀಸರು ಹಾಗೂ ಪಂಚಾ ಯತ್ ಟಾಸ್ಕ್ ಫೋರ್ಸ್ ಸದಸ್ಯರು ಜನಸಂದಣಿಯನ್ನು ನಿಯಂತ್ರಿಸಿದರು. ಮಾರ್ಕೆಟ್‌ನಲ್ಲಿರುವ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಿದ್ದು, ಸಂತೆ ವ್ಯಾಪಾರಕ್ಕೆ ಸ್ಥಳೀಯ ಮೈದಾನದಲ್ಲಿ ಅವಕಾಶ ಕಲ್ಪಿಸಲಾಗಿತ್ತು.