×
Ad

ಜಾಗತಿಕ ತಾಪಮಾನ ಏರಿಕೆಯ ಕಾರಣಿಕರ್ತ, ಅಪರಾಧಿ ಮನುಷ್ಯನೇ -ದಿನೇಶ್ ಹೊಳ್ಳ

Update: 2021-06-07 22:03 IST

ಉಡುಪಿ, ಜೂ.7: ದಕ್ಷಿಣ ಭಾರತದ ಸಕಲ ಜೀವರಾಶಿಗಳ ಜೀವಸೆಲೆ ಪಶ್ಚಿಮ ಘಟ್ಟವಾಗಿದ್ದು, ಇಂದು ಮನುಷ್ಯನ ದುರಾಸೆ ಹಾಗೂ ಪಶ್ಚಿಮ ಘಟ್ಟವನ್ನು ವ್ಯಾಪಾರಿ ಲಾಭದ ದೃಷ್ಟಿಯಿಂದ ಬಳಕೆ ಮಾಡುತ್ತಿರುವುದು ಇಂದಿನ ಪರಿಸರಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಹೀಗಾಗಿ ಜಾಗತಿಕ ತಾಪಮಾನ ಏರಿಕೆಯ ಅಪರಾಧಿ ಮನುಷ್ಯನೇ ಆಗಿದ್ದಾನೆ ಎಂದು ಸಹ್ಯಾದ್ರಿ ಸಂರಕ್ಷಣಾ ಸಂಚಯದ ಮುಖ್ಯಸ್ಥ ಹಾಗೂ ಪರಿಸರ ತಜ್ಞ /ಹೋರಾಟಗಾರರಾದ ಮಂಗಳೂರಿನ ದಿನೇಶ್ ಹೊಳ್ಳ ಹೇಳಿದ್ದಾರೆ.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾವಹಿಸಿ ಅವರು ಮಾತನಾಡುತಿದ್ದರು.

ಇಂದಿನ ದಿನಗಳಲ್ಲಿ ಮರಗಿಡಗಳ ನಾಶ, ಅರಣ್ಯ ಒತ್ತುವರಿ, ನದಿಮೂಲಗಳ ಮೇಲೆ ಹಸ್ತಕ್ಷೇಪ, ಕಾಡುಪ್ರಾಣಿಗಳ ಹತ್ಯೆಯಂತಹಾ ಕೃತ್ಯಗಳಿಂದ ಜೀವ ವೈವಿಧ್ಯತೆಯಲ್ಲಿ ಆಹಾರ ಸರಪಳಿ ವ್ಯವಸ್ಥೆಗೆ ತೊಂದರೆಯಾಗಿದ್ದು, ಇದನ್ನು ಸಮರೋಪಾದಿಯಲ್ಲಿ, ಅದರಲ್ಲೂ ವಿದ್ಯಾರ್ಥಿ ಯುವ ಸಮೂಹ ಸಂಘಟಿತ ಹೋರಾಟದ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕೆಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿ ರಾಷ್ಟ್ರೀಯ ಪರಿಸರ ಆರೈಕೆ ಒಕ್ಕೂಟದ ಮುಖ್ಯಸ್ಥ ಶಶಿಧರ ಶೆಟ್ಟಿ ಮಾತನಾಡಿ, ಪರಿಸರ ಸಂರಕ್ಷಣೆಯು ಭಾರತದ ಸಂವಿಧಾನದ ಅನುಚ್ಛೇದ 48-ಎ ಅನ್ವಯ ಸರಕಾರದ ಹಾಗೂ 51-ಎ(ಜಿ)ಯ ಪ್ರಕಾರ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿಯ ಮಾನವ ಹಕ್ಕುಗಳ ಸಂರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭಾಗ್ ಮಾತನಾಡಿ, ನ್ಯಾಯಾಲಯದ ಎಲ್ಲಾ ಪ್ರಕರಣಗಳಲ್ಲಿ ನ್ಯಾಯಾಧೀಶರು ತೀರ್ಪನ್ನು ನೀಡಿರು ತ್ತಾರೆ. ಆದರೆ ಈ ಎಲ್ಲಾ ತೀರ್ಪುಗಳು ನ್ಯಾಯಪರ ಆಗಿರಬೇಕೆಂದೇನೂ ಇಲ್ಲ. ಆದ್ದರಿಂದ ಕಾನೂನು ವಿದ್ಯಾರ್ಥಿಗಳು ತಮ್ಮ ಕಾನೂನು ಜ್ಞಾನದ ಉಪಯೋಗ ದಿಂದ ಪರಿಸರ ಸಂರಕ್ಷಣೆಗೆ ಹಾಗೂ ಮಾನವ ಹಕ್ಕುಗಳ ಬಗ್ಗೆ ಹೋರಾಟ ಮಾಡಬೇಕೆಂದು ಹೇಳಿದರು.

ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ. ನಿರ್ಮಲ ಕುಮಾರಿ ಅತಿಥಿ ಗಳನ್ನು ಸ್ವಾಗತಿಸಿದರೆ, ಪ್ರಾಧ್ಯಾಪಕ ನವೀನ್‌ಚಂದ್ರ ಅತಿಥಿಗಳನ್ನು ಪರಿಚಯಿ ಸಿದರು. ಕಾಲೇಜಿನ ಎನ್ನೆಸ್ಸೆಸ್ ಘಟಕದ ಸಂಯೋಜನಾಧಿಕಾರಿ ಸುರೇಖಾ ವಂದಿಸಿದರು. ಹರ್ಷಿತಾ ತುಂಗೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News