ಮಂಗಳೂರಿನ ಬೀದಿಗೆ ಬಿದ್ದ ತುಮಕೂರಿನ ಕುಟುಂಬಕ್ಕೆ ಆಸರೆ
ಮಂಗಳೂರು, ಜೂ.7: ಕೊರೋನ-ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ನಗರದ ಲೇಡಿಗೋಶನ್ ಆಸ್ಪತ್ರೆ ಸಮೀಪ ಬೀದಿಗೆ ಬಿದ್ದಿದ್ದ ತುಮಕೂರಿನ ಕುಟುಂಬವೊಂದಕ್ಕೆ ಮಂಗಳೂರಿನ ‘ಟೀಂ ಬಿ ಹ್ಯೂಮನ್’ ತಂಡವು ಆಸರೆ ನೀಡಿದೆ.
ತುಮಕೂರಿನ ಸುಬ್ರಹ್ಮಣ್ಯ ಎಂಬವರು ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದರು. ಸ್ವಂತ ಮನೆಯೂ ಇರಲಿಲ್ಲ. ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದರು. ಮಂಗಳೂರಿನಲ್ಲೇನಾದರು ಕೆಲಸ ಸಿಕ್ಕೀತೋ ಎಂಬ ಆಸೆಯಲ್ಲಿರುವಾಗಲೇ ಪತ್ನಿಯ ಹೆರಿಗೆಯ ಅವಧಿಯೂ ಸಮೀಪಿಸಿತ್ತು. ಹಾಗೇ ಆ್ಯಂಬುಲೆನ್ಸ್‌ನಲ್ಲಿ ಪತ್ನಿ ಮತ್ತು ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಂದ ಸುಬ್ರಹ್ಮಣ್ಯ ಮಂಗಳೂರು ತಲುಪಿದರು. ಪತ್ನಿಯನ್ನು ನಗರದ ಲೇಡಿಗೋಶನ್ ಆಸ್ಪತ್ರೆಗೂ ದಾಖಲಿಸಿದರು. ಅಲ್ಲಿ ಹೆಣ್ಣು ಮಗುವಿನ ಜನನವೂ ಆಯಿತು.
ಆಸ್ಪತ್ರೆಯಿಂದ ಡಿಸ್‌ಜಾರ್ಜ್ ಆದ ಬಳಿಕ ಮುಂದೇನು ಮಾಡಬೇಕು ಎಂದು ಸುಬ್ರಹ್ಮಣ್ಯರಿಗೆ ತಿಳಿಯಲಿಲ್ಲ. ಕೆಲಸ ಹುಡುಕಿದರೂ ಸಿಗಲಿಲ್ಲ. ಪತ್ನಿ, ಹಸುಗೂಸು ಮತ್ತು ಒಬ್ಬ ಮಗ, ಒಬ್ಬ ಮಗಳ ಸಹಿತ ಎಲ್ಲರೂ ಬೀದಿಗೆ ಬಿದ್ದರು. ಕನಿಷ್ಟ ಹಸುಗೂಸಿಗೆ ಸ್ನಾನ ಮಾಡಿಸಲು ಸಾಬೂನು ಖರೀದಿಸಲೂ ಕೂಡ ಸುಬ್ರಹ್ಮಣ್ಯರ ಕೈಯಲ್ಲಿ ಕಾಸಿರಲಿಲ್ಲ. ಯಾರೋ ಒಬ್ಬರು ಲಾಡ್ಜ್‌ವೊಂದರಲ್ಲಿ ಸುಬ್ರಹ್ಮಣ್ಯರ ಕುಟುಂಬಕ್ಕೆ ಆಶ್ರಯ ನೀಡುವ ಭರವಸೆ ನೀಡಿದರು. ಅದರಂತೆ ನಾಲ್ಕೈದು ದಿನ ಈ ಕುಟುಂಬ ಲಾಡ್ಜ್‌ನಲ್ಲಿತ್ತು. ಲಾಡ್ಜ್‌ನ ಬಾಡಿಗೆ ಪಾವತಿಸುವುದಾಗಿ ಹೇಳಿ ಹೋದ ವ್ಯಕ್ತಿ ರವಿವಾರವಾದರೂ ಪತ್ತೆಯಾಗದ ಕಾರಣ ಲಾಡ್ಜ್‌ನವರು ಸುಬ್ರಹ್ಮಣ್ಯರ ಕುಟುಂಬವನ್ನು ಸೋಮವಾರ ಬೆಳಗ್ಗೆ ಬೀದಿ ಪಾಲು ಮಾಡಿ ಬಿಟ್ಟಿದ್ದರು.
ಸೋಮವಾರ ಸಂಜೆಯ ವೇಳೆಗೆ ಈ ಕುಟುಂಬವು ‘ವಾರ್ತಾಭಾರತಿ’ಯ ತಂಡದ ಕಣ್ಣಿಗೆ ಬಿತ್ತು. ಸುಬ್ರಹ್ಮಣ್ಯ ತನ್ನ ಸಂಕಷ್ಟವನ್ನು ತೋಡಿ ಕೊಂಡದ್ದನ್ನು ‘ವಾರ್ತಾಭಾರತಿ’ಯ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಯಿತು. ಕುಟಂಬದ ಕಣ್ಣೀರ ಕಥೆಯನ್ನು ವೀಕ್ಷಿಸಿದ ‘ವಾರ್ತಾಭಾರತಿ’ಯ ಓದುಗರು, ಸಾಮಾಜಿಕ ಸಂಘಟನೆಗಳ ಮುಖಂಡರು, ಚೈಲ್ಡ್‌ಲೈನ್‌ನ ಕಾರ್ಯಕರ್ತರು ಹೀಗೆ ಹಲವು ಮಂದಿ ತಕ್ಷಣ ನೆರವಿಗಾಗಿ ಧಾವಿಸಿದರು. ಅದರಂತೆ ಸದ್ಯ ಈ ಕುಟುಂಬಕ್ಕೆ ‘ಟೀಂ ಬಿ ಹ್ಯೂಮನ್’ನ ಮುಖ್ಯಸ್ಥ ಆಸೀಫ್ ಡೀಲ್ಸ್ ಆಸರೆ ಒದಗಿಸಿದ್ದಾರೆ. ‘ವಾರ್ತಾಭಾರತಿ’ಯ ವರದಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
''ವಾರ್ತಾಭಾರತಿಯ ವರದಿಯನ್ನು ಗಮನಿಸಿದ ತಕ್ಷಣ ನಮ್ಮ ತಂಡದ ಸದಸ್ಯರು ಕುಟುಂಬ ಬೀದಿಗೆ ಬಿದ್ದ ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ಅವರನ್ನು ಅದೇ ಲಾಡ್ಜ್‌ನಲ್ಲಿ ಉಳಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದೇವೆ. ಊಟ, ತಿಂಡಿ, ಮತ್ತಿತರ ದಿನಬಳಕೆ ಸಾಮಗ್ರಿ, ವೈದ್ಯಕೀಯ ಇತ್ಯಾದಿ ನೆರವು ನೀಡಿದ್ದೇವೆ. ಒಂದೆರೆಡು ದಿನದಲ್ಲಿ ಈ ಕುಟುಂಬಕ್ಕೆ ಕುಲಶೇಖರದಲ್ಲಿ ವಸತಿ ಕಲ್ಪಿಸುವೆವು. ಅಲ್ಲದೆ ಸುಬ್ರಹ್ಮಣ್ಯರಿಗೆ ಕೆಲಸದ ವ್ಯವಸ್ಥೆಯನ್ನೂ ಮಾಡುವೆವು''.
- ಆಸೀಫ್ ಡೀಲ್ಸ್, ಮುಖ್ಯಸ್ಥರು, ಟೀಂ ಬಿ ಹ್ಯೂಮನ್ ಮಂಗಳೂರು
''ಬೀದಿ ಪಾಲಾದ ಸುಬ್ರಹ್ಮಣ್ಯರ ಕುಟುಂಬಕ್ಕೆ ನೆರವು ನೀಡುವುದಕ್ಕೆ ಸಂಬಂಧಿಸಿ ನಾನು ಟೀಂ ಬಿ ಹ್ಯೂಮನ್‌ನ ಮುಖ್ಯಸ್ಥರ ಜೊತೆ ನಿಕಟ ಸಂಪರ್ಕದಲ್ಲಿರುವೆ. ಸುಬ್ರಹ್ಮಣ್ಯ ಮತ್ತವರ ಪತ್ನಿಗೂ ಕೆಲಸ ಕೊಡಬೇಕಾಗಿದೆ. ಹಸುಗೂಸಿನ ಆರೈಕೆ ಮಾಡಬೇಕಿದೆ. ಇಬ್ಬರು ಮಕ್ಕಳಿಗೆ ಶಾಲಾ ಶಿಕ್ಷಣ ಕೊಡಿಸಬೇಕಿದೆ. ಆ ಕುಟುಂಬಕ್ಕೆ ಎಲ್ಲಾ ರೀತಿಯಲ್ಲೂ ಸಹಾಯ-ಸಹಕಾರ ನೀಡಲು ಟೀಂ ಬಿ ಹ್ಯೂಮನ್ ಜೊತೆ ನಾವು ಸಿದ್ಧರಿದ್ದೇವೆ''.
- ಜೋಸೆಫ್ ಕ್ರಾಸ್ತಾ, ಮುಖ್ಯಸ್ಥರು, ಸ್ನೇಹಾಲಯ ಮಂಜೇಶ್ವರ