ಕೊರೋನದಿಂದ ತಾಯಿ ಸಾವು: ಸೋಂಕಿತ 8 ದಿನಗಳ ಶಿಶು ಒಂದು ವಾರದಲ್ಲಿ ಗುಣಮುಖ

Update: 2021-06-07 17:45 GMT

ಬೆರ್ಹಾಮ್ಪುರ, ಜೂ. 7: ಕೊರೋನ ಸೋಂಕಿನಿಂದ ತಾಯಿ ಮೃತಪಟ್ಟ ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ 8 ದಿನಗಳ ಶಿಶುವೊಂದು ಕೊರೋನ ಸೋಂಕಿನಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.

ಗಂಜಾಮ್ ನ ಕುಕುಡಖಂಡಿ ಬ್ಲಾಕ್ ನ ವ್ಯಾಪ್ತಿಯಲ್ಲಿ ಬರುವ ಪಾದರ್ಬಲಿ ಪಂಚಾಯತ್ನಲ್ಲಿ ದೀಪ್ತಿಮಾಯಿ ದೇವಿ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಗರ್ಭಿಣಿಯಾದ ಸಂದರ್ಭ ಅವರು ಕೊರೋನ ಸೋಂಕಿಗೆ ತುತ್ತಾಗಿದ್ದರು. ಅನಂತರ ಎಂಕೆಸಿಜಿ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರಿಗೆ ಮೇ 29ರಂದು ಹೆಣ್ಣು ಶಿಶು ಜನಿಸಿತ್ತು.

ಹೆರಿಗೆಯ ಸಂದರ್ಭ ಅವರ ಆರೋಗ್ಯ ಹದಗೆಟ್ಟಿತ್ತು. ಅವರು ಮರು ದಿನ ಮೃತಪಟ್ಟಿದ್ದರು. ಶಿಶುವನ್ನು ನವಜಾತ ಶಿಶುಗಳ ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು. 24 ಗಂಟೆಗಳ ಬಳಿಕ ಶಿಶುವಿಗೆ ಕೊರೋನ ಪರೀಕ್ಷೆ ನಡೆಸಲಾಗಿತ್ತು. ಶಿಶುವಿನ ವರದಿ ಪಾಸಿಟಿವ್ ಬಂದಿತ್ತು.

ಅನಂತರ 2.8 ಕಿ.ಗ್ರಾಂ. ತೂಕವುಳ್ಳ ಶಿಶು ನಿಧಾನವಾಗಿ ಚೇತರಿಸಿಕೊಂಡಿತ್ತು ಹಾಗೂ ಜೂನ್ 4ರಂದು ಸಂಪೂರ್ಣ ಗುಣಮುಖವಾಗಿತ್ತು. ಎಂಕೆಸಿಜಿಯಿಂದ ಶುಕ್ರವಾರ ಬಿಡುಗಡೆಯಾಗಿರುವ ಶಿಶು ಈಗ ತಂದೆಯ ಆರೈಕೆಯಲ್ಲಿದೆ.

ಗಂಜಾಮ್ ನ ಜಿಲ್ಲಾಧಿಕಾರಿ ವಿಜಯ್ ಅಮೃತಾ ಕುಲಂಗೆ ಹಾಗೂ ಕುಕುದಖಂಡಿ ಬಿಡಿಒ ಗದಾಧರ್ ಪಾತ್ರ ಅವರು ದೀಪ್ತಿಮಯೀ ದೇವಿ ಮನೆಗೆ ಭೇಟಿ ನೀಡಿದ್ದಾರೆ ಹಾಗೂ ಕುಟುಂಬಕ್ಕೆ ಎಲ್ಲಾ ನೆರವು ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ದೀಪ್ತಿಮಯಿ ದೇವಿ ಅವರು ಮುಂಚೂಣಿ ಕಾರ್ಯಕರ್ತರು. ಸರಕಾರದ ಮಾರ್ಗಸೂಚಿಯಂತೆ ಅವರ ಕುಟುಂಬದ ಸದಸ್ಯರಿಗೆ ಸಾಕಷ್ಟು ನೆರವು ನೀಡಲಾಗುವುದು ಎಂದು ಕುಲಂಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News