×
Ad

ದೇಶದಲ್ಲಿ ಕೋವಿಡ್‌ನಿಂದ ಅನಾಥರಾದ ಮಕ್ಕಳೆಷ್ಟು ಗೊತ್ತೇ?

Update: 2021-06-08 09:27 IST

ಹೊಸದಿಲ್ಲಿ, ಜೂ.8: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ತಂದೆ- ತಾಯಿಯನ್ನು ಕಳೆದುಕೊಂಡ 30 ಸಾವಿರಕ್ಕೂ ಅಧಿಕ ಮಕ್ಕಳ ಕಾಳಜಿ ಮತ್ತು ಸುರಕ್ಷೆ ವಹಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ವಿವಿಧ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಎನ್‌ಸಿಪಿಸಿಆರ್ ಈ ಸಂಬಂಧ ಅಫಿಡವಿಟ್ ಸಲ್ಲಿಸಿದೆ.

ಕೋವಿಡ್‌ನಿಂದಾಗಿ 3632 ಮಕ್ಕಳು ಅನಾಥರಾಗಿದ್ದು, ಕಳೆದ ವರ್ಷದ ಎಪ್ರಿಲ್ 1ರಿಂದ ಈ ವರ್ಷದ ಜೂನ್ 5ರವರೆಗೆ ಒಟ್ಟು 26,176 ಮಕ್ಕಳು ಒಬ್ಬ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದೆ. ರಾಜ್ಯ ಸರ್ಕಾರಗಳು ಕೋವಿಡ್ ಸಂಬಂಧಿ ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟವರ ಬಗ್ಗೆ ತಮ್ಮ ಪೋರ್ಟೆಲ್‌ನಲ್ಲಿ ಅಪ್‌ಲೋಡ್ ಮಾಡಿದ ಅಂಕಿಅಂಶಗಳನ್ನು ಆಧರಿಸಿ ಈ ಸಂಖ್ಯೆ ಲೆಕ್ಕಹಾಕಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಇಂಥ ಮಕ್ಕಳ ಬಗ್ಗೆ ಹಲವು ರಾಜ್ಯಗಳು ಇನ್ನೂ ಮಾಹಿತಿ ಸಂಗ್ರಹಿಸಿಲ್ಲವಾದ್ದರಿಂದ ಈ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಎನ್‌ಸಿಪಿಸಿಆರ್ ಹೇಳಿದೆ. ಹಲವೆಡೆ ಗ್ರಾಮೀಣ ಪ್ರದೇಶಗಳಲ್ಲಿ, ದಿಲ್ಲಿ ಮತ್ತು ಪಶ್ಚಿಮ ಬಂಗಾಳದಂಥ ರಾಜ್ಯಗಳಲ್ಲಿ ಈ ಮಾಹಿತಿ ಸಂಗ್ರಹಿಸಿಲ್ಲ ಎಂದು ಹೇಳಲಾಗಿದೆ.

ವಕೀಲೆ ಸ್ವರೂಪಮಾ ಚತುರ್ವೇದಿ ಕೋರ್ಟ್‌ನಲ್ಲಿ ಈ ಸಂಬಂಧ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕಳೆದ ಒಂದು ವರ್ಷದಲ್ಲಿ 274 ಮಕ್ಕಳು ಪರಿತ್ಯಕ್ತರಾಗಿದ್ದು, ಬಾಧಿತರಾಗಿರುವ ಸುಮಾರು 20ರಿಂದ 30 ಸಾವಿರ ಮಕ್ಕಳು 0-13 ವಯೋಮಿತಿಯವರು ಎಂದು ಹೇಳಿದ್ದರು. ಈ ಕುರಿತ ಮಾಹಿತಿ ಒದಗಿಸಲು ದಿಲ್ಲಿ ಮತ್ತು ಪಶ್ಚಿಮ ಬಂಗಾಳ ವಿಫಲವಾಗಿವೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಹೇಳಿದರು. ಈ ಮಾಹಿತಿಯನ್ನು ತಕ್ಷಣ ಎನ್‌ಪಿಸಿಆರ್‌ನ ಹೊಸದಾಗಿ ಸೃಷ್ಟಿಸಲಾದ ಬಾಲಸ್ವರಾಜ್ ಪೋರ್ಟೆಲ್‌ನಲ್ಲಿ ಅಪ್‌ಲೋಡ್ ಮಾಡುವಂತೆ ನ್ಯಾಯಪೀಠ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News