ಕೇಂದ್ರದ ವಿಳಂಬ ನಿರ್ಧಾರದಿಂದ ಹಲವು ಜೀವಗಳು ಕೋವಿಡ್ ಗೆ ಬಲಿ: ಮಮತಾ ಬ್ಯಾನರ್ಜಿ

Update: 2021-06-08 04:10 GMT

ಕೊಲ್ಕತ್ತಾ, ಜೂ.8: ದೇಶದ ಎಲ್ಲ ವಯಸ್ಕರಿಗೆ ಉಚಿತವಾಗಿ ಲಸಿಕೆ ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಆರಂಭದಲ್ಲೇ ಕೈಗೊಳ್ಳಬೇಕಿತ್ತು. ಈ ನಿರ್ಧಾರ ವಿಳಂಬ ಮಾಡಿರುವುದರಿಂದ ಹಲವು ಅಮಾಯಕ ಜೀವಗಳು ಬಲಿಯಾಗಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಎಲ್ಲರಿಗೂ ಉಚಿತ ಲಸಿಕೆ ನೀಡುವ ಸಂಬಂಧ ಪ್ರಧಾನಿ ಮೋದಿ ಮಾಡಿರುವ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ರಾಜ್ಯಗಳ ಅಹವಾಲುಗಳು ಪ್ರಧಾನಿಗೆ ಕೇಳಿಸಲು ನಾಲ್ಕು ತಿಂಗಳು ಬೇಕಾಯಿತು ಎಂದು ವ್ಯಂಗ್ಯವಾಡಿದರು.

ಎಲ್ಲರಿಗೂ ಉಚಿತ ಲಸಿಕೆ ನೀಡುವಂತೆ ಆಗ್ರಹಿಸಿ ಫೆಬ್ರವರಿ 21ರಿಂದ ಹಲವು ಬಾರಿ ಪತ್ರ ಬರೆದಿದ್ದೆ ಎಂದು ಅವರು ವಿವರಿಸಿದ್ದಾರೆ. ನಾಲ್ಕು ತಿಂಗಳು ಕಳೆದು ಹಲವು ಒತ್ತಡಗಳನ್ನು ಎದುರಿಸಿದ ಬಳಿಕ ಅಂತಿಮವಾಗಿ ನಮ್ಮ ಆಗ್ರಹವನ್ನು ಕೇಳಿಸಿಕೊಂಡು, ನಮ್ಮ ದೀರ್ಘಕಾಲದ ಬೇಡಿಕೆಯನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಮಮತಾ ಟ್ವೀಟ್ ಮಾಡಿದ್ದಾರೆ.

"ಸಾಂಕ್ರಾಮಿಕದ ಆರಂಭದಿಂದಲೇ ಭಾರತದ ಜನತೆಯ ಜೀವಕ್ಕೆ ಆದ್ಯತೆ ನೀಡಬೇಕಿತ್ತು. ದುರಾದೃಷ್ಟವಶಾತ್, ಪ್ರಧಾನಿಯವರ ಈ ವಿಳಂಬಿತ ನಿರ್ಧಾರ ಈಗಾಗಲೇ ಹಲವು ಜೀವಗಳನ್ನು ಬಲಿ ಪಡೆದಿವೆ. ಇನ್ನಾದರೂ ಲಸಿಕೆ ಅಭಿಯಾನವನ್ನು ಉತ್ತಮವಾಗಿ ನಿಭಾಯಿಸಲಿ; ಜನರ ಮೇಲೆ ಗಮನಹರಿಸಲಿ; ಪ್ರಚಾರದ ಮೇಲಲ್ಲ" ಎಂದು ಅವರು ಚುಚ್ಚಿದ್ದಾರೆ.

ಜೂನ್ 21ರಿಂದ ದೇಶಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಸೋಮವಾರ ಪ್ರಧಾನಿ ಮೋದಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News