ಒಂದೇ ಕುಟುಂಬದ ನಾಲ್ವರ ಮೇಲೆ ಟ್ರಕ್‌ ಹರಿಸಿ ಕೊಂದ ಯುವಕ: ʼಮುಸ್ಲಿಂ ದ್ವೇಷವೇʼ ಕಾರಣ ಎಂದ ಪೊಲೀಸರು

Update: 2021-06-08 08:23 GMT
Photo: BBC

ಒಟ್ಟಾವ :  ಕೆನಡಾದ ಒಂಟಾರಿಯೋ ಪ್ರಾಂತ್ಯದಲ್ಲಿ ಕಪ್ಪು ಬಣ್ಣದ ಪಿಕಪ್ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ವಾಹನವನ್ನು ಮುಸ್ಲಿಂ ಕುಟುಂಬವೊಂದರ ನಾಲ್ಕು ಮಂದಿಯ ಮೇಲೆ ಹರಿಸಿ ಅವರನ್ನು ಸಾಯಿಸಿದ ಆಘಾತಕಾರಿ ಘಟನೆ ರವಿವಾರ ಸಂಜೆ ನಡೆದಿದೆ. ಘಟನೆಯಲ್ಲಿ ಓರ್ವ ಬಾಲಕ ಗಾಯಗೊಂಡಿದ್ದಾನೆ. ಇದೊಂದು ಪೂರ್ವನಿಯೋಜಿತ ದಾಳಿ ಎಂದು ಪೊಲೀಸರು ಹೇಳಿದ್ದಾರೆ.

ಶಂಕಿತ ಆರೋಪಿ, 20ರ ಯುವಕನೊಬ್ಬ ಘಟನಾ ಸ್ಥಳದಿಂದ ತಕ್ಷಣ ಪರಾರಿಯಾಗಿದ್ದರೂ ಸ್ಥಳದಿದ ಸುಮಾರು ಏಳು ಕಿಮೀ ದೂರವಿರುವ ಮಾಲ್ ಒಂದರಲ್ಲಿ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತ ರಕ್ಷಾಕವಚವೊಂದನ್ನು ಧರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

"ಇದೊಂದು ಪೂರ್ವಯೋಜಿತ ಕೃತ್ಯ, ಅವರು ಮುಸ್ಲಿಮರೆಂಬ ಕಾರಣಕ್ಕೆ ದ್ವೇಷದಿಂದ ಟಾರ್ಗೆಟ್ ಮಾಡಲಾಗಿದೆ," ಎಂದು ಪೊಲೀಸರು ನಂತರ ತಿಳಿಸಿದ್ದಾರೆ.

ದಾಳಿಯಲ್ಲಿ ಮೃತಪಟ್ಟವರ ಹೆಸರುಗಳನ್ನು ಪೊಲೀಸರು ಬಹಿರಂಗಗೊಳಿಸಿಲ್ಲ, ಆದರೆ 74 ವರ್ಷದ ಮಹಿಳೆ, 46 ವರ್ಷದ ಪುರುಷ, 44 ವರ್ಷದ ಮಹಿಳೆ ಹಾಗೂ 15 ವರ್ಷದ ಬಾಲಕಿ ಮೃತಪಟ್ಟಿದ್ದಾರೆ, ಅವರು ಒಂದೇ ಕುಟುಂಬದ ಮೂರು ತಲೆಮಾರಿನವರಾಗಿದ್ದಾರೆ ಎಂದು ಅಲ್ಲಿನ ಮೇಯರ್ ಎಡ್ ಹೋಲ್ಡರ್ ತಿಳಿಸಿದ್ದಾರೆ.

ದಾಳಿ ವೇಳೆ ಗಾಯಗೊಂಡ ಒಂಬತ್ತು ವರ್ಷದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತ ಚೇತರಿಸಿಕೊಳ್ಳುತ್ತಿದ್ದಾನೆ.

ದಾಳಿಕೋರನನ್ನು ನಥಾನಿಯಲ್ ವೆಲ್ಟ್ ಮ್ಯಾನ್ ಎಂದು ಗುರುತಿಸಲಾಗಿದ್ದು ಆತನ ವಿರುದ್ಧ ನಾಲ್ಕು ಕೊಲೆ ಪ್ರಕರಣಗಳು ಹಾಗೂ ಒಂದು ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಲಂಡನ್‌ ನಲ್ಲಿರುವ ಮುಸ್ಲಿಮ್‌ ಸಮುದಾಯದವರು ಮತ್ತು ನಮ್ಮ ದೇಶದಲ್ಲಿರುವ ಎಲ್ಲ ಮುಸ್ಲಿಮರು ನಾವು ಅವರೊಂದಿಗೆ ನಿಲ್ಲುತ್ತೇವೆ ಎನ್ನುವುದನ್ನು ಅರಿತಿದ್ದಾರೆ. ನಮ್ಮ ಸಮುದಾಯದಲ್ಲಿ ಇಸ್ಲಾಮೋಫೋಬಿಯಾಗೆ ಯಾವುದೇ ಸ್ಥಾನವಿಲ್ಲ. ಇದು ನಿಲ್ಲಬೇಕು" ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೋ ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News