ಲಿಯೊನೆಲ್ ಮೆಸ್ಸಿ ದಾಖಲೆ ಮುರಿದ ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ

Update: 2021-06-08 08:34 GMT
Photo source: Twitter(@IndianFootball)
 

ದೋಹಾ, ಜೂ.8: ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಎರಡು ಗೋಲ್ ಗಳನ್ನು ದಾಖಲಿಸುವ ಮೂಲಕ ಭಾರತದ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಅವರು ಅರ್ಜೆಂಟೀನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ದಾಖಲೆಯನ್ನು ಮುರಿದಿದ್ದಾರೆ.

ಸೋಮವಾರ ರಾತ್ರಿ ಇಲ್ಲಿ ನಡೆದ 2022 ಫಿಫಾ ವಿಶ್ವಕಪ್ ಮತ್ತು 2023 ಎಎಫ್‌ಸಿ ಏಷ್ಯನ್ ಕಪ್‌ಗಾಗಿ ಜಂಟಿ ಪ್ರಾಥಮಿಕ ಅರ್ಹತಾ ಸುತ್ತಿನಲ್ಲಿ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 36 ವರ್ಷದ ಚೆಟ್ರಿ ಈ ಸಾಧನೆ ಮಾಡಿದ್ದಾರೆ.

ಲಿಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿದ ಚೆಟ್ರಿ 74 ಅಂತಾರಾಷ್ಟ್ರೀಯ ಗೋಲ್ ಗಳೊಂದಿಗೆ ಎರಡನೇ ಅತಿ ಹೆಚ್ಚು ಸಕ್ರಿಯ ಅಂತಾರಾಷ್ಟ್ರೀಯ ಗೋಲ್ ಸ್ಕೋರರ್ ಎನಿಸಿಕೊಂಡಿದ್ದಾರೆ. ಸಕ್ರಿಯ ಅಂತರಾಷ್ಟ್ರೀಯ ಗೋಲ್ ಸ್ಕೋರರ್ ಪಟ್ಟಿಯಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (103) ಅವರು ಮೊದಲ ಸ್ಥಾನದಲ್ಲಿದ್ದಾರೆ.

ಬಾರ್ಸಿಲೋನಾದ ತಾರೆ ಮೆಸ್ಸಿ (72 ಗೋಲು)ಯಿಂದ ಚೆಟ್ರಿ ಎರಡು ಗೋಲುಗಳಿಂದ ಮುಂದಿದ್ದಾರೆ ಮತ್ತು ಯುಎಇಯ ಅಲಿ ಮಬ್‌ಖೌತ್ (73 ಗೋಲು) ಅವರಿಗಿಂತ ಒಂದು ಗೋಲಿನಿಂದ ಮುಂದಿದ್ದಾರೆ. ಚೆಟ್ರಿ ವಿಶ್ವ ಫುಟ್‌ಬಾಲ್‌ನ ಸಾರ್ವಕಾಲಿಕ ಟಾಪ್- 10 ಪ್ರವೇಶಿಸಲು ಕೇವಲ ಒಂದು ಗೋಲಿನಿಂದ ಹಿಂದಿದ್ದಾರೆ.

ಸೋಮವಾರ ಜಸ್ಸಿಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಚೆಟ್ರಿ 79ನೇ ನಿಮಿಷದಲ್ಲಿ ಹಾಗೂ ಹೆಚ್ಚುವರಿ ಸಮಯದಲ್ಲಿ ಗೋಲುಗಳನ್ನು ದಾಖಲಿಸಿದರು. ಭಾರತ ಈ ಪಂದ್ಯವನ್ನು 2-0 ಅಂತರದಿಂದ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಭಾರತವು ಏಳು ಪಂದ್ಯಗಳಿಂದ ಆರು ಅಂಕಗಳೊಂದಿಗೆ ಗ್ರೂಪ್ ಇ ಯಲ್ಲಿ ಮೂರನೇ ಸ್ಥಾನಕ್ಕೆ ಏರಿತು. ಆದರೆ ವಿಶ್ವಕಪ್ 2022ಗೆ ಅರ್ಹತೆ ಪಡೆಯಲು ಭಾರತ ತಂಡವು ಈಗಾಗಲೇ ವಿಫಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News