×
Ad

2006ರ ಬೋಟ್‌ ದುರಂತದ ಕುರಿತು ವಾಟ್ಸಾಪ್‌ ಸ್ಟೇಟಸ್‌: ಜಮ್ಮುಕಾಶ್ಮೀರದ ಪತ್ರಕರ್ತನ ಮೇಲೆ ಪ್ರಕರಣ ದಾಖಲು

Update: 2021-06-08 16:29 IST

ಶ್ರೀನಗರ: 2006 ರಲ್ಲಿ ದೋಣಿ ಅಪಘಾತದಲ್ಲಿ ಮೃತಪಟ್ಟ ಮಕ್ಕಳ ಫೋಟೋವನ್ನು ಹೊಂದಿರುವ ವಾಟ್ಸಾಪ್ ಸ್ಟೇಟಸ್‌ ಹಾಕಿದ್ದಕ್ಕಾಗಿ ಜಮ್ಮು ಕಾಶ್ಮೀರದ ಪೊಲೀಸರು ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ndtv.com ಮಂಗಳವಾರ ವರದಿ ಮಾಡಿದೆ.

ಬಾಂಡಿಪೋರಾ ಪೊಲೀಸರು ಜೂನ್ 4 ರಂದು ಪತ್ರಕರ್ತ ಸಾಜಿದ್ ರೈನಾ ವಿರುದ್ಧದ ಎಫ್ಐಆರ್ ಬಗ್ಗೆ ಟ್ವೀಟ್ ಮಾಡಿದ್ದರು. ಆದರೆ ಅವರ ವೃತ್ತಿಯ ಬಗ್ಗೆ ಅಥವಾ ಅವರು ವಾಟ್ಸಾಪ್ ನಲ್ಲಿ ಹಾಕಿದ ಪೋಸ್ಟ್ ಬಗ್ಗೆ ವಿವರ ನೀಡಿಲ್ಲ ಎಂದು ತಿಳಿದು ಬಂದಿದೆ.

23 ವರ್ಷದ ರೈನಾ, ಬಂಡಿಪೋರಾ ಜಿಲ್ಲೆಯ ಸುದ್ದಿ ಸಂಸ್ಥೆಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ndtv.com ವರದಿ ಮಾಡಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಮತ್ತು 505 (ಸಾರ್ವಜನಿಕರಿಗೆ ಭಯ ಅಥವಾ ಎಚ್ಚರಿಕೆ ಉಂಟುಮಾಡುವ ಉದ್ದೇಶ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ವರದಿ ತಿಳಿಸಿದೆ.

ಫೋಟೋವನ್ನು ಹಂಚಿಕೊಂಡ ಒಂದು ಗಂಟೆಯೊಳಗೆ “ವುಲರ್ ಹುತಾತ್ಮರು” ಎಂಬ ಶೀರ್ಷಿಕೆಯೊಂದಿಗಿನ ಫೋಟೋವನ್ನು ಅಳಿಸಿದ್ದೇನೆ ಎಂದು ಪತ್ರಕರ್ತ ಹೇಳಿದರು. "ಮೇ 30 ದುರಂತದ 15 ನೇ ವಾರ್ಷಿಕೋತ್ಸವವಾಗಿತ್ತು ಮತ್ತು ನಾನು ಮಕ್ಕಳ ಚಿತ್ರದೊಂದಿಗೆ ವಾಟ್ಸಾಪ್ ಸ್ಟೇಟಸ್ ಅಪ್‌ಲೋಡ್ ಮಾಡಿದ್ದೇನೆ" ಎಂದು ಅವರು ತಿಳಿಸಿದರು. “ಸಂಜೆ, ಭದ್ರತಾ ಏಜೆನ್ಸಿಯ ಹಿರಿಯ ಅಧಿಕಾರಿಯೊಬ್ಬರು ನನಗೆ ಕರೆ ಮಾಡಿದ್ದರು. ನಾನು ಕ್ಷಮೆಯಾಚಿಸಿದೆ ಮತ್ತು ನನ್ನ [ವಾಟ್ಸಾಪ್] ಸ್ಟೇಟಸ್‌ ಅನ್ನು ಅಳಿಸಿದೆ.” ಎಂದು ಅವರು ಹೇಳಿದರು.

ತನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎರಡು ದಿನಗಳ ನಂತರ ತಿಳಿದುಬಂದಿದೆ ಎಂದು ರೈನಾ ಹೇಳಿದ್ದಾರೆ.

ತನ್ನ ವಿರುದ್ಧದ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದೇನೆ ಎಂದು ಹೇಳಿದ ಅವರು, ಬಂಡಿಪೋರಾದ ಪೊಲೀಸ್ ಅಧೀಕ್ಷಕರು ಭರವಸೆ ನೀಡಿದ್ದಾರೆ ಎಂದರು. "ಪೊಲೀಸರು ನನಗೆ ನ್ಯಾಯ ಒದಗಿಸುತ್ತಾರೆ ಮತ್ತು ಈ ಎಫ್ಐಆರ್ ಅನ್ನು ಹಿಂತೆಗೆದುಕೊಳ್ಳುತ್ತಾರೆ ಎಂದು ಖಾತ್ರಿಯಿದೆ. ಅವರು ನನ್ನ ಭವಿಷ್ಯ ಮತ್ತು ನನ್ನ ವೃತ್ತಿಯ ಬಗ್ಗೆ ಯೋಚಿಸಬೇಕು" ಎಂದು ಅವರು ಹೇಳಿದರು.

ಮೇ 30, 2006 ರಂದು ಬಂಡಿಪೋರಾದ ವುಲಾರ್ ಸರೋವರದಲ್ಲಿ ನೌಕಾಪಡೆಯ ದೋಣಿ ಮಗುಚಿ ಇಪ್ಪತ್ತೊಂದು ಮಕ್ಕಳು ಸಾವನ್ನಪ್ಪಿದ್ದರು. ಅವರು ಹಂಡ್ವಾರಾದ ಬರ್ನಿಂಗ್ ಕ್ಯಾಂಡಲ್ ಶಾಲೆಯ ವಿದ್ಯಾರ್ಥಿಗಳಾಗಿದ್ದು, ವಿಹಾರಕ್ಕೆಂದು ತೆರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News