ಬಿ.ಸಿ.ರೋಡ್: ಡೀಸೆಲ್ ಸಾಗಿಸುವ ಟ್ಯಾಂಕರ್ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ; ಆತಂಕದ ವಾತಾವರಣ
Update: 2021-06-08 17:37 IST
ಬಂಟ್ವಾಳ, ಜೂ.8: ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಮುಂಭಾಗದಲ್ಲಿ ಮಂಗಳವಾರ ಸಂಜೆ ನಡೆದ ಘಟನೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಇಂಧನ ಸಾಗಿಸಿಕೊಂಡು ಹೋಗುವ ಟ್ಯಾಂಕರ್ ನ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.
ಸಂಜೆ ಸುಮಾರು 4.30ರ ವೇಳೆ ಘಟನೆ ನಡೆದಿದ್ದು, ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದ್ದು, ಸಮೀಪದಲ್ಲೇ ಇದ್ದ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಸಫಲರಾದರು.
ಬೈಕಂಪಾಡಿಯಿಂದ ಬೆಂಗಳೂರಿಗೆ ಟ್ಯಾಂಕರ್ ಇಂಧನ ಹೇರಿಕೊಂಡು ಸಾಗುತ್ತಿದ್ದ ವೇಳೆ ವಾಹನದ ಚಕ್ರ ಜಾಮ್ ಆಗಿ ಬೆಂಕಿ ಹೊತ್ತಿಕೊಂಡಿತು ಎಂದು ತಿಳಿದುಬಂದಿದೆ. ಕೂಡಲೇ ಚಾಲಕ ವಾಹನ ನಿಲ್ಲಿಸಿದ ಕಾರಣ ಯಾವುದೇ ಗಂಭೀರ ಅನಾಹುತ ತಲೆದೋರಲಿಲ್ಲ.