ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಪ್ರಶಂಸಿಸಿ ಪತ್ರ ಬರೆದ ಬಾಲಕಿ: ಸಿಜೆಐ ನೀಡಿದ ಪ್ರತಿಕ್ರಿಯೆ ಏನು ಗೊತ್ತೇ?
ಹೊಸದಿಲ್ಲಿ: ಭಾರತದ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣರವರಿಗೆ ಕೇರಳದ ೫ನೇ ತರಗತಿಯ ವಿದ್ಯಾರ್ಥಿನಿ ಪತ್ರ ಬರೆದು ಪ್ರಶಂಸೆ ವ್ಯಕ್ತಪಡಿಸಿದ್ದಾಳೆ. ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನ್ಯಾಯಾಲಯವು ನೀಡಿದ್ದ ಆದೇಶಗಳ ಕುರಿತಾದಂತೆ ಬಾಲಕಿ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆಯುವ ಮೂಲಕ ಧನ್ಯವಾದ ತಿಳಿಸಿದ್ದಾಳೆ ಎಂದು ndtv.com ವರದಿ ಮಾಡಿದೆ.
ಕೇಂದ್ರೀಯ ವಿದ್ಯಾಲಯ ತ್ರಿಶೂರ್ ನ ಲಿಡ್ವಿನಾ ಜೋಸೆಫ್ ಎಂಬ 5ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯು ತನ್ನ ಮೆಚ್ಚುಗೆ ಸೂಚಿಸಲು ಸಿಜೆಐಯವರ ಚಿತ್ರವೊಂದನ್ನೂ ರಚಿಸಿದ್ದಾಳೆ.
ವಿವಿಧ ರಾಜ್ಯಗಳು ಸಲ್ಲಿಸಿದ್ದ ಮನವಿಯಂತೆ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಕೋವಿಡ್ ಪರಿಸ್ಥಿತಿಯ ಕುರಿತಾದಂತೆ ಕೆಲ ಆದೇಶಗಳನ್ನು ನೀಡಿತ್ತು. ಭಾರತದಾದ್ಯಂತ ಆಮ್ಲಜನಕ ಹಂಚಿಕೆಯನ್ನು ಪುನರುಜ್ಜೀವನಗೊಳಿಸಲು ಹಾಗೂ ವಿತರಣಾ ವ್ಯವಸ್ಥೆಯ ಲೆಕ್ಕ ಪರಿಶೋಧನೆ ನಡೆಸಲು ಸುಪ್ರೀಂ ಕೋರ್ಟ್ ಕೋರಿತ್ತು. ಸುಪ್ರೀಂಕೋರ್ಟ್ ಮಧ್ಯಪ್ರವೇಶದ ಬಳಿಕ ಆಕ್ಸಿಜನ್ ಕೊರತೆ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡು ಬಂದಿತ್ತು.
ಈ ಕುರಿತಾದಂತೆ ಬಾಲಕಿಗೆ ಪತ್ರದ ಮೂಲಕ ಉತ್ತರ ಬರೆದ ಎನ್.ವಿ ರಮಣ, "ನನ್ನ ಪ್ರೀತಿಯ ಲಿಡ್ವಿನಾ, ತಮ್ಮ ಕಾರ್ಯಗಳಲ್ಲಿ ನಿರತರಾಗಿರುವ ನ್ಯಾಯಾಧೀಶರ ಸುಂದರವಾದ ಚಿತ್ರದೊಂದಿಗೆ ನಿನ್ನ ಪತ್ರವನ್ನು ಸ್ವೀಕರಿಸಿದ್ದೇನೆ. ದೇಶದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ನೀವು ನಿಗಾ ಇಟ್ಟಿರುವ ರೀತಿ ಮತ್ತು ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜನರ ಯೋಗಕ್ಷೇಮದ ಕುರಿತು ನಿಮಗಿರುವ ಕಾಳಜಿಯಿಂದ ನಾನು ಪ್ರಭಾವಿತನಾಗಿದ್ದೇನೆ. ನೀವು ತುಂಬಾ ಜಾಗರೂಕರಾಗಿ, ತಿಳುವಳಿಕೆಯಿಂದ ಜವಾಬ್ದಾರಿತ ಪ್ರಜೆಯಾಗಿ ಬೆಳೆಯುವಿರಿ ಹಾಗೂ ರಾಷ್ಟ್ರ ನೀರ್ಮಾಣಕ್ಕೆ ಕೊಡುಗೆ ನೀಡುವಿರಿ ಎಂಬ ಖಾತರಿ ನನಗಿದೆ. ನಿಮ್ಮ ಸರ್ವತೋಮುಖ ಯಶಸ್ಸಿಗೆ ನನ್ನ ಶುಭಾಶಯಗಳು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪತ್ರದ ಜೊತೆಗೆ ಭಾರತೀಯ ಸಂವಿಧಾನದ ಪ್ರತಿಯೊಂದನ್ನು ಹಸ್ತಾಕ್ಷರ ಸಹಿತ ಬಾಲಕಿಗೆ ಕಳಿಹಿಸಲಾಗಿದೆ ಎಂದು ತಿಳಿದು ಬಂದಿದೆ.