ಅಮೆರಿಕದ ಯಕ್ಷಪ್ರೇಮಿಗಳಿಂದ ಯಕ್ಷಕಲಾವಿದರಿಗೆ ನೆರವು
ಉಡುಪಿ, ಜೂ.8: ಕೊರೋನದಿಂದಾಗಿ ಸಂಕಷ್ಟಕ್ಕೊಳಗಾದ ಯಕ್ಷಗಾನ ಕಲಾವಿದರಿಗೆ ನೀಡಲು ಅಮೆರಿಕದ ಮಿಯಾಮಿಯಲ್ಲಿರುವ ಮಹದೇವ ಜಿ.ಭಟ್ ವರ್ಗಾಸರ ಇವರು ತಮ್ಮ ಸ್ನೇಹಿತರೊಂದಿಗೆ ಸೇರಿ ಸಂಗ್ರಹಿಸಿದ 1700 ಡಾಲರ್ (ಒಟ್ಟು 1.21ಲಕ್ಷ ರೂ.) ಮೊಬಲಗನ್ನು ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಗೆ ಕಳುಹಿಸಿಕೊಟ್ಟಿದ್ದಾರೆ.
ಯಕ್ಷಗಾನ ಕಲಾರಂಗ ಈ ಮೊತ್ತವನ್ನು ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಾದ ಸಂಪಾಜೆ ಶೀನಪ್ಪ ರೈ, ಸುರತ್ಕಲ್ (20,000 ರೂ.), ಪುರುಷೋತ್ತಮ ಪೂಂಜಾ, ಮಂಗಳೂರು (20,000 ರೂ.), ಕೃಷ್ಣ ಭಂಡಾರಿ ಗುಣವಂತೆ, ಹೊನ್ನಾವರ (20,000ರೂ.), ಹಳ್ಳಾಡಿ ಜಯರಾಮ ಶೆಟ್ಟಿ, ಬಾರಕೂರು (15,000), ಬೆದ್ರಾಡಿ ನರಸಿಂಹ ನಾಯಕ್, ಅಂಪಾರು (15,000), ಪ್ರಸನ್ನ ಭಟ್ ಬಾಳ್ಕಟ್, ಕಿರಿಮಂಜೇಶ್ವರ (10,000), ಹೊಳಮೊಗೆ ನಾಗಪ್ಪ, ಕುಂದಾಪುರ (7,000), ದಾಸನಡ್ಕ ರಾಮ ಕುಲಾಲ, ಕಾಸರಗೋಡು (7,000) ಹಾಗೂ ಆಲ್ಮನೆ ಚಂದ್ರಶೇಖರ, ತೀರ್ಥಹಳ್ಳಿ (7,000ರೂ.) ವಿತರಿಸಿದೆ.
ಯಕ್ಷಗಾನ ಕಲಾವಿದರ ನೋವನ್ನು ಅರಿತು ಆರ್ಥಿಕ ನೆರವು ನೀಡಿರುವ ಯಕ್ಷಗಾನ ಪ್ರಿಯ ಮಹಾದೇವ ಜಿ. ಭಟ್ ಹಾಗೂ ಬಳಗಕ್ಕೆ ಸಮಸ್ತ ಯಕ್ಷಗಾನ ಅಭಿಮಾನಿಗಳ ಪರವಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.