ಖಾಸಗಿ ಆಸ್ಪತ್ರೆಯಲ್ಲಿ ಸತ್ತವರ ಸಂಖ್ಯೆ 22 ಅಲ್ಲ 7 ಮತ್ತು ಸಾವಿಗೆ ಆಮ್ಲಜನಕ ಕೊರತೆ ಕಾರಣವಲ್ಲ: ಆಗ್ರಾ ಜಿಲ್ಲಾಡಳಿತ
ಲಕ್ನೋ,ಜೂ.8: ಆಗ್ರಾದ ಪ್ರತಿಷ್ಠಿತ ಪರಾಸ್ ಹಾಸ್ಪಿಟಲ್ನಲ್ಲಿ ಎ.26ರಂದು 22 ರೋಗಿಗಳು ಮೃತಪಟ್ಟಿದ್ದರು ಎನ್ನುವುದನ್ನು ಜಿಲ್ಲಾಡಳಿತವು ನಿರಾಕರಿಸಿದೆ.
ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಪರಾಸ್ ಹಾಸ್ಪಿಟಲ್ ನ ಮಾಲಕ ಡಾ.ಅರಿಂಜಯ ಜೈನ್ ಅವರು,‘ಯಾರೆಲ್ಲ ಬದುಕುಳಿಯುತ್ತಾರೆ ಎನ್ನುವುದನ್ನು ತಿಳಿಯಲು ಅಣಕು ಖಾಸಗಿ ಆಸ್ಪತ್ರೆಕಾರ್ಯಾಚರಣೆಯಲ್ಲಿ ರೋಗಿಗಳಿಗೆ ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಆ ಸಂದರ್ಭ ಕೋವಿಡ್ ಎರಡನೇ ಅಲೆಯು ಉತ್ತುಂಗದಲ್ಲಿದ್ದು ನಗರದಲ್ಲಿ ತೀವ್ರ ಆಮ್ಲಜನಕ ಕೊರತೆಯಿತ್ತು. ತಮ್ಮ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ದಾಖಲಿಸುವಂತೆ ನಾವು ಜನರನ್ನು ಕೋರಿದ್ದೆವು,ಆದರೆ ಅದಕ್ಕೆ ಯಾರೂ ಸಿದ್ಧರಿರಲಿಲ್ಲ. ಹೀಗಾಗಿ ಪ್ರಯೋಗವೊಂದನ್ನು ಕೈಗೊಳ್ಳಲು ನಾನು ನಿರ್ಧರಿಸಿದ್ದೆ ಮತ್ತು ಅಣಕು ಕಾರ್ಯಾಚರಣೆ ನಡೆದಿತ್ತು.
ಎ.26ರ ಬೆಳಿಗ್ಗೆ ಏಳು ಗಂಟೆಗೆ ಐದು ನಿಮಿಷಗಳ ಕಾಲ ಆಮ್ಲಜನಕ ಪೂರೈಕೆಯನ್ನು ನಾವು ನಿಲ್ಲಿಸಿದ್ದೆವು. 22 ರೋಗಿಗಳು ಉಸಿರಿಗಾಗಿ ಒದ್ದಾಡತೊಡಗಿದ್ದರು. ಇವರಲ್ಲಿ ಕೊವಿಡ್ ಮತ್ತು ಕೋವಿಡೇತರ ರೋಗಿಗಳು ಸೇರಿದ್ದರು ಮತ್ತು ಯಾರೂ ಬದುಕುಳಿಯಲಿಲ್ಲ. ನಂತರ ಐಸಿಯು ವಾರ್ಡ್ಗಳಲ್ಲಿ ಉಳಿದಿದ್ದ 74 ರೋಗಿಗಳ ಬಂಧುಗಳಿಗೆ ತಮ್ಮ ಸ್ವಂತ ಆಮ್ಲಜನಕ ಸಿಲಿಂಡರ್ಗಳನ್ನು ತರುವಂತೆ ನಾವು ಸೂಚಿಸಿದ್ದೆವು ’ಎಂದು ಹೇಳಿರುವುದು ಕೇಳಿಬಂದಿದೆ.
‘ಎ.26ರಂದು ಆಸ್ಪತ್ರೆಯಲ್ಲಿ 26 ಜನರು ಮೃತಪಟ್ಟಿರಲಿಲ್ಲ.
ಎ.26 ಮತ್ತು 27ರಂದು ಕೇವಲ ಏಳು ರೋಗಿಗಳು ಮೃತಪಟ್ಟಿದ್ದರು ಮತ್ತು ಅವರ ಸಾವುಗಳಿಗೆ ಆಮ್ಲಜನಕ ಕೊರತೆ ಕಾರಣವಾಗಿರಲಿಲ್ಲ. ಎ.26ರಂದು ಆಮ್ಲಜನಕದ ಕೊರತೆಯ ಬಗ್ಗೆ ಮಾಹಿತಿ ಲಭಿಸಿದಾಗ ನಾವು ಆಸ್ಪತ್ರೆಗೆ ಆಮ್ಲಜನಕ ಸಿಲಿಂಡರ್ಗಳನ್ನು ಒದಗಿಸಿದ್ದೆವು ’ಎಂದು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿರುವ ಆಗ್ರಾ ಜಿಲ್ಲಾಧಿಕಾರಿ ಪ್ರಭು ಎನ್ ಸಿಂಗ್ ಅವರು,‘ವೈರಲ್ ಆಗಿರುವ ವೀಡಿಯೊ ನಮ್ಮ ಗಮನಕ್ಕೆ ಬಂದಿದ್ದು,ಆ ಬಗ್ಗೆ ವಿವರವಾದ ತನಿಖೆ ನಡೆಸಲಾಗುತ್ತಿದೆ ’ಎಂದಿದ್ದಾರೆ.
ವೈರಲ್ ವೀಡಿಯೊದ ಬಗ್ಗೆ ಅತಿರಂಜಿತ ವರದಿಗಳಿಗಾಗಿ ಮಾಧ್ಯಮಗಳನ್ನು ಟೀಕಿಸಿ ಸಿಂಗ್ ಟ್ವೀಟಿಸಿದ್ದಾರೆ.
ವೀಡಿಯೊ ವೈರಲ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೈನ್ ವೈರಲ್ ವೀಡಿಯೊವನ್ನು ನಿರಾಕರಿಸಿಲ್ಲ,ಆದರೆ ತನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸಲು ಅವರನ್ನು ಗುರುತಿಸಲು ಅಣಕು ಕಾರ್ಯಾಚರಣೆ ಯನ್ನು ನಡೆಸಿದ್ದೆವು. ಎ.26ರಂದು ನಾಲ್ವರು ಮತ್ತು 27ರಂದು ಮೂವರು ಕೋವಿಡ್ ರೋಗಿಗಳು ಮೃತರಾಗಿದ್ದರು ಎಂದು ತಿಳಿಸಿದ್ದರು.