ಶಂಭೂರು ಎಎಂಆರ್ ಡ್ಯಾಂ ಮೇಲ್ಭಾಗ, ಕೆಳ ಭಾಗದ ಜನರಿಗೆ ಸೂಚನೆ
ಬಂಟ್ವಾಳ, ಜೂ.8: ತಾಲೂಕಿನ ಶಂಭೂರು ಗ್ರಾಮದ ಮುಡಿಮುಗೇರಿನಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ಕಟ್ಟಿರುವ ಎಎಂಆರ್ ಅಣೆಕಟ್ಟಿನಲ್ಲಿ ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ನೀರು ಶೇಖರಿಸಲು ಜೂನ್ 8ರಿಂದ ಅಥವಾ ನಂತರದ ದಿನಗಳಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಎಎಂಆರ್ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ನದಿ ನೀರಿನ ಮಟ್ಟ ಏರುವುದರಿಂದ ನದಿ ತೀರದ ಆಸುಪಾಸಿನ ಜನರು ಸೂಕ್ತವಾದ ಮುಂಜಾಗರೂಕತೆ ವಹಿಸಿಕೊಳ್ಳಲು ಸೂಚಿಸಿದೆ.
ಎಎಂಆರ್ ಅಣೆಕಟ್ಟಿನಲ್ಲಿ ಶೇಖರಿಸಿದ ನೀರನ್ನು ವಿದ್ಯುಚ್ಛಕ್ತಿ ಉತ್ಪಾದನೆಗಾಗಿ ಬಳಸಿ ಅದೇ ನೀರನ್ನು ವಾಪಸ್ ನದಿಯ ಕೆಳಭಾಗದಲ್ಲಿ ಬಿಡಲಾಗು ವುದು. ಮಳೆಗಾಲದ ಆರಂಭದ ನಂತರ ನೀರಿನ ಒಳಹರಿವಿನ ಪ್ರಮಾಣವನ್ನು ಹೊಂದಿಕೊಂಡು ಅಣೆಕಟ್ಟಿಗೆ ಅಳವಡಿಸಿದ ಗೇಟುಗಳನ್ನು ತೆರೆದು, ನೀರನ್ನು ಕೆಳಭಾಗಕ್ಕೆ ಬಿಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನದಿಯ ಅಣೆಕಟ್ಟಿನ ಕೆಳಭಾಗದ ಹಾಗೂ ಮೇಲ್ಭಾಗದ ಇಕ್ಕೆಲಗಳಲ್ಲಿ ನೀರಿನ ಮಟ್ಟವು ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ಏರಿಳಿತವಾಗುವುದರಿಂದ ನದಿಯ ದಡದಲ್ಲಿ ವಾಸಿಸುವ ಜನರು ಮತ್ತು ಅವರ ಸಾಕು ಪ್ರಾಣಿಗಳ ಸಂರಕ್ಷಣೆ ವಿಷಯವಾಗಿ ಮುಂಜಾಗರೂಕತೆ ವಹಿಸಲು ಸೂಚಿಸಲಾಗಿದೆ.
ನರಿಕೊಂಬು, ತುಂಬೆ, ಕಡೇಶಿವಾಲಯ, ಬಾಳ್ತಿಲ, ಸಜಿಪಮೂಡ, ನಾವೂರು, ಸರಪಾಡಿ, ಬರಿಮಾರು, ಸಜಿಪಮುನ್ನೂರು, ಬಂಟ್ವಾಳ ಪುರಸಭೆ ಪ್ರದೇಶಗಳ ಜನರಿಗೆ ಈ ಸೂಚನೆ ನೀಡಲಾಗಿದೆ.