×
Ad

ಮಸೀದಿ,ಮದ್ರಸಗಳ ಸಿಬ್ಬಂದಿ ವರ್ಗಕ್ಕೆ ಪ್ಯಾಕೇಜ್ ಘೋಷಿಸುವಂತೆ ಮನವಿ

Update: 2021-06-08 21:38 IST

ಮಂಗಳೂರು, ಜೂ.8: ರಾಜ್ಯದ ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲ್ಪಡದ ಮಸೀದಿಗಳ ಇಮಾಮ್ ಮತ್ತು ಮೌಜಿನ್ ಹಾಗೂ ಎಲ್ಲ ಮದ್ರಸಗಳ ಸಿಬ್ಬಂದಿ ವರ್ಗಕ್ಕೆ ತುರ್ತು ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸುವಂತೆ ರಾಜ್ಯ ವಕ್ಫ್ ಮಂಡಳಿಯ ಸದಸ್ಯರಾದ ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ, ಯಾಕೂಬ್ ಯೂಸುಫ್ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ರಾಜ್ಯದ 10,193 ನೋಂದಾಯಿತ ಹಾಗೂ 1368 ನೊಂದಾಯಿಸದ ಒಟ್ಟು 11,561 ಮಸೀದಿಗಳ ಪೇಶ್ ಇಮಾಮರು ಹಾಗೂ ಮೌಜಿನ್‌ಗಳಿಗೆ ತಗಲುವ ಅಂದಾಜು ಸಹಾಯಧನದ ಮೊತ್ತ 693.66 ಲ.ರೂ. ಹಾಗೂ 1572 ನೋಂದಾಯಿಸಿದ ಮತ್ತು 495 ನೋಂದಾಯಿಸದ ಸಹಿತ 2,067 ಮದ್ರಸಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 5080 ಮುಅಲ್ಲಿಂ/ಸಿಬ್ಬಂದಿ ವರ್ಗಕ್ಕೆ ತಗಲುವ ಅಂದಾಜು ಸಹಾಯಧನ ಮೊತ್ತ 152.40 ಲಕ್ಷ ರೂ. ಸಹಿತ ಒಟ್ಟು 846.00 ಲಕ್ಷ ರೂ.ಗಳನ್ನು ಮಂಜೂರು ಮಾಡುವಂತೆ ವಕ್ಫ್ ಮಂಡಳಿಯ ಸಿಇಒ ರಾಜ್ಯ ಸರಕಾರವನ್ನು ಕೋರಿದ್ದರು. ಆದರೆ ಸರಕಾರವು 2021-22ನೆ ಸಾಲಿನ ಬಜೆಟ್‌ನಲ್ಲಿ ಪೇಶ್ ಇಮಾಮ್ ಮತ್ತು ಮೌಜಿನ್‌ಗಳಿಗೆ ಸಂಭಾವನೆಗೆ ಒದಗಿಸಲಾದ 55.00 ಕೋ.ರೂ ಮೊತ್ತದಿಂದಲೇ ಕೋವಿಡ್ 2ನೆ ಅಲೆಯ ತುರ್ತು ಪರಿಹಾರಧನವನ್ನು ಭರಿಸಲು ಆದೇಶಿಸಿದೆ.

ಬಜೆಟ್‌ನಲ್ಲಿ ಒದಗಿಸಲಾಗಿರುವ ಮೊತ್ತವನ್ನೇ ತುರ್ತು ಪರಿಹಾರಕ್ಕೆ ಭರಿಸಿದರೆ ವಕ್ಫ್ ನೋಂದಾಯಿತ ಸಂಸ್ಥೆಗಳಲ್ಲಿನ ಪೇಶ್ ಇಮಾಮ್ ಮತ್ತು ಮೌಜಿನ್‌ಗಳಿಗೆ ಕೊಡಲಾಗುವ ಮಾಸಿಕ ಗೌರವಧನಕ್ಕೆ ತೊಡಕಾಗಲಿದೆ. 2ನೆ ಅಲೆಯ ನಿರ್ಬಂಧದಿಂದಾಗಿ ನೋಂದಾಯಿತ ಸಂಸ್ಥೆಗಳ ಇಮಾಮ್ ಮತ್ತು ಮೌಜಿನ್‌ಗಳಂತೆಯೇ ನೋಂದಣಿಗೊಳ್ಳದ ಸಂಸ್ಥೆಗಳ ಪೇಶ್ ಇಮಾಮ್, ವೌಜಿನ್, ಮದ್ರಸ ಸಿಬ್ಬಂದಿ ಕೂಡ ಸಂಕಷ್ಟ ಕ್ಕೀಡಾಗಿದ್ದಾರೆ. ಹಾಗಾಗಿ ಅವರಿಗೆ ವಿಶೇಶ ಪ್ಯಾಕೇಜ್ ಮೂಲಕ ಸಹಾಯಧನ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News