ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧ: ದ.ಕ.ಜಿಲ್ಲೆಯ 9 ಕಡೆ ಸಿಎಫ್‌ಐ ಪ್ರತಿಭಟನೆ
ಮಂಗಳೂರು, ಜೂ.8:ಫ್ಯಾಸಿಸ್ಟ್ ಅಜೆಂಡಾದ ಭಾಗವಾಗಿ ರಾಜ್ಯದಲ್ಲಿ ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲೆಯ ಬಜಪೆ, ಅಡ್ಡೂರು, ಪೊರ್ಕೊಡಿ, ಅಂಗರಗುಂಡಿ, ಮುಲ್ಕಿ, ಮೂಡು ಬಿದಿರೆ, ಗಂಟಲ್ಖಟ್ಟೆ, ಹಂಡೆಲ್, ಕೈಕಂಬಗಳಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದೆ.
ಕೆಲವು ದಿನಗಳ ಹಿಂದೆ ಉಪಮುಖ್ಯಮಂತ್ರಿ ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣದ ಕೇಸರೀಕರಣದ ಭಾಗವಾಗಿದೆ. ಇದನ್ನು ರಾಜ್ಯದಲ್ಲಿ ಅನುಷ್ಠಾನ ಗೊಳಿಸಲು ವಿದ್ಯಾರ್ಥಿ ಸಮುದಾಯ ಬಿಡುವುದಿಲ್ಲವೆಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಸಿಎಫ್‌ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಶರ್ಫುಧ್ಧೀನ್ ಬಜ್ಪೆ, ಜಿಲ್ಲಾ ಉಪಾಧ್ಯಕ್ಷ ಫಾರೀಶ್ ಸೂರಲ್ಪಾಡಿ, ಕೋಶಾಧಿಕಾರಿ ಸರ್ಫ್ರಾಝ್, ಜಿಲ್ಲಾ ಸಮಿತಿ ಸದಸ್ಯ ನಬೀಲ್, ಯೂನಿಟ್ ನಾಯಕರಾದ ಮುಆಝ್, ಫಾರಿಶ್, ಶಿಹಾಮ್, ಝಾಹಿದ್, ನಿಝಾಮ್, ಸಮದ್, ಶಾಖಿಫ್, ಅಫ್ರಾಝ್, ಮೆಹ್ತಾಬ್ ಮತ್ತಿತರರು ಪಾಲ್ಗೊಂಡಿದ್ದರು.