ಜೂ.10ರಿಂದ ಕೋಟತಟ್ಟು ಗ್ರಾ.ಪಂ.ನಲ್ಲಿ ಸಂಪೂರ್ಣ ಲಾಕ್‌ಡೌನ್
ಕೋಟ, ಜೂ.9: ಕೊರೋನ ಸೋಂಕು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜೂ.10ರ ಮಧ್ಯಾಹ್ನ 12ಗಂಟೆಯಿಂದ ಜೂ.15ರ ಬೆಳಗ್ಗೆ 6ಗಂಟೆವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ. ಕೊರೋನ ಸೋಂಕು ಹರಡುದನ್ನು ತಡೆಯುವ ಇಂದು ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೋರಯ್ಯರವರ ನೇತೃತ್ವದಲ್ಲಿ ಕೋಟತಟ್ಟು ಗ್ರಾಮೀಣ ಕಾರ್ಯಪಡೆಯ ಅಧ್ಯಕ್ಷೆ ಅಶ್ವಿನಿ ಅಧ್ಯಕ್ಷತೆಯಲ್ಲಿ ಕೋಟತಟ್ಟು ಗ್ರಾಪಂ ಸಭಾ ಭವನದಲ್ಲಿ ಕರೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.
ಗ್ರಾಪಂ ವ್ಯಾಪ್ತಿಯಲ್ಲಿ ಜೂ.9ರವರೆಗೆ 47 ಕೊರೋನಾ ಪ್ರಕರಣಗಳು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಅದರಂತೆ ನಾಳೆಯಿಂದ ಐದು ದಿನಗಳ ಕಾಲ ಗ್ರಾಮದಲ್ಲಿ ಎಲ್ಲ ಅಂಗಡಿ, ಬ್ಯಾಂಕ್, ಸೊಸೈಟಿಗಳು, ಕಛೇರಿಗಳು, ಫ್ಯಾಕ್ಟರಿಗಳು ಸಂಪೂರ್ಣ ಬಂದ್ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ನಿಯಮ ಉಲ್ಲಂಘಿಸುವವರ ಪರಾವನಿಗೆ ರದ್ದು ಪಡಿಸಿ ಅವರ ಮೇಲೆ ಕೇಸು ದಾಖಲಿಸುವ ಎಚ್ಚರಿಕೆಯನ್ನು ನೀಡಲಾಯಿತು.
ತುರ್ತು ಸೇವೆ, ಆಸ್ಪತ್ರೆ, ಮೆಡಿಕಲ್, ಪತ್ರಿಕೆ, ಕೃಷಿ, ಹಾಲು ಮಾರಾಟಕ್ಕೆ ಅವಕಾಶ ಕಲ್ಪಿಸಲಾಯಿತು. ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸಲು ಸದಸ್ಯರನ್ನು ನೇಮಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಾ ಎಸ್.ಪೂಜಾರಿ, ಕೋಟ ಕಂದಾಯ ಅಧಿಕಾರಿ ರಾಜು, ಕೋಟ ಗ್ರಾಮ ಲೆಕ್ಕಾಧಿಕಾರಿ ಚಲುವರಾಜ್, ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ. ಮೊದಲಾದವರು ಉಪಸ್ಥಿತರಿದ್ದರು.