ಕ್ಯೂಎಸ್ ವಿಶ್ವ ರ‍್ಯಾಂಕಿಂಗ್‌: ಬೆಂಗಳೂರಿನ ಐಐಎಸ್ಸಿ ವಿಶ್ವದ ಅತ್ಯುನ್ನತ ಸಂಶೋಧನಾ ವಿವಿ

Update: 2021-06-09 15:19 GMT
photo: facebook (@IISc Bangalore)

ಹೊಸದಿಲ್ಲಿ,ಜೂ.9: ವಿವಿಗಳ ರ‍್ಯಾಂಕಿಂಗ್‌ ನ ವಾರ್ಷಿಕ ಪ್ರಕಟಣೆ ಕ್ವಾಕರೆಲಿ ಸೈಮಂಡ್ಸ್ (ಕ್ಯೂಎಸ್) ವಿಶ್ವ ರ‍್ಯಾಂಕಿಂಗ್‌ ಗಳು 2022 ಪಟ್ಟಿಯಲ್ಲಿ ಬೆಂಗಳೂರಿನ ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಾಯನ್ಸ್ (ಐಐಎಸ್ಸಿ) ವಿಶ್ವದ ಅತ್ಯುನ್ನತ ಸಂಶೋಧನಾ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಸೈಟೇಶನ್ಸ್ ಪರ್ ಫ್ಯಾಕಲ್ಟಿ ಸೂಚಕದಂತೆ ಐಐಎಸ್ಸಿ ಬೆಂಗಳೂರು ನೂರಕ್ಕೆ ನೂರರಷ್ಟು ಪರಿಪೂರ್ಣ ಅಂಕಗಳನ್ನು ಸಾಧಿಸುವ ಮೂಲಕ ವಿಶ್ವದ ಅತ್ಯುನ್ನತ ಸಂಶೋಧನಾ ವಿವಿಯಾಗಿದೆ ಎಂದು ಕ್ಯೂಎಸ್ ಹೇಳಿಕೆಯಲ್ಲಿ ತಿಳಿಸಿದೆ. ಕ್ಯೂಎಸ್ ರ‍್ಯಾಂಕಿಂಗ್‌ಗಳನ್ನು ನಿರ್ಧರಿಸುವ ಆರು ಮಾನದಂಡಗಳಲ್ಲಿ ಸೈಟೇಶನ್ಸ್ ಪರ್ ಫ್ಯಾಕಲ್ಟಿ ಒಂದಾಗಿದೆ.

ಭಾರತೀಯ ವಿವಿಯೊಂದು ಸಂಶೋಧನೆ ಅಥವಾ ಇತರ ಯಾವುದೇ ಮಾನದಂಡದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಮಧ್ಯ ಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾಗಳಿಗೆ ಕ್ಯೂಎಸ್ ಇಂಟಲಿಜೆನ್ಸ್ ಘಟಕದ ಪ್ರಾದೇಶಿಕ ನಿರ್ದೇಶಕರಾಗಿರುವ ಅಶ್ವಿನ್ ಫೆರ್ನಾಂಡಿಸ್ ತಿಳಿಸಿದರು. ಆದರೆ ಒಟ್ಟಾರೆ ರ‍್ಯಾಂಕಿಂಗ್‌ ಗಳಲ್ಲಿ ಐಐಎಸ್ಸಿ ಭಾರತದ ಮೂರನೇ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದೆ. 

ಐಐಟಿ ಬಾಂಬೆ ಮತ್ತು ಐಐಟಿ ದಿಲ್ಲಿ ಅನುಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ. ಈ ಎಲ್ಲ ಮೂರೂ ಭಾರತೀಯ ಶಿಕ್ಷಣ ಸಂಸ್ಥೆಗಳು ವಿಶ್ವದ ಅತ್ಯುನ್ನತ 200 ವಿವಿಗಳಲ್ಲಿ ಸೇರಿವೆ ಎಂದು ಕ್ಯೂಎಸ್ ಹೇಳಿಕೆಯಲ್ಲಿ ತಿಳಿಸಿದೆ. ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( ಎಂಐಟಿ), ಆಕ್ಸಫರ್ಡ್ ವಿವಿ ಮತ್ತು ಸ್ಟಾನ್ಫರ್ಡ್ ವಿವಿ ಇವು ಅನುಕ್ರಮವಾಗಿ ಜಾಗತಿಕ ಮೊದಲ ಮೂರು ಸ್ಥಾನಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News