×
Ad

ಜೂ.15ರಿಂದ ಮಂಗಳೂರು-ಮುಂಬೈ ದೈನಂದಿನ ರೈಲು ಸಂಚಾರ ಪುನರಾರಂಭ

Update: 2021-06-09 21:23 IST
ಸಾಂದರ್ಭಿಕ ಚಿತ್ರ

ಉಡುಪಿ, ಜೂ.9: ರೈಲು ನಂ.02620/02619 ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ ಮುಂಬೈ- ಮಂಗಳೂರು ಸೆಂಟ್ರಲ್ ದೈನಂದಿನ ಹಬ್ಬದ ವಿಶೇಷ ರೈಲು ಸಂಚಾರವನ್ನು ದಕ್ಷಿಣ ರೈಲ್ವೆಯ ಸಹಯೋಗದೊಂದಿಗೆ ಜೂ.15ರಿಂದ ಪುನರಾರಂಭಿಸುವುದಾಗಿ ಕೊಂಕಣ ರೈಲ್ವೆ ಇಂದು ಪ್ರಕಟಿಸಿದೆ.

ಮಂಗಳೂರು ಸೆಂಟ್ರಲ್-ಮುಂಬಯಿ ದೈನಂದಿನ ಸೂಪರ್‌ಫಾಸ್ಟ್ ರೈಲು ಜೂ.15ರಿಂದ 30ರವರೆಗೆ ಪ್ರತಿದಿನ ಅಪರಾಹ್ನ 12:40ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡಲಿದ್ದು, ಮರುದಿನ ಮುಂಜಾನೆ 6:35ಕ್ಕೆ ಮುಂಬೈ ಲೋಕಮಾನ್ಯ ತಿಲಕ್ ತಲುಪಲಿದೆ.

ಜೂ.16ರಿಂದ ಜುಲೈ1ರವರೆಗೆ ಪ್ರತಿದಿನ ಅಪರಾಹ್ನ 3:20ಕ್ಕೆ ಮುಂಬೈಯಿಂದ ಹೊರಡುವ ರೈಲು, ಮರುದಿನ ಬೆಳಗ್ಗೆ 10:10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಈ ರೈಲಿಗೆ ಮಂಗಳೂರಿನಿಂದ ಹೋಗುವಾಗ ಸುರತ್ಕಲ್, ಮುಲ್ಕಿ, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟ, ಗೋಕರ್ಣ ರೋಡ್, ಅಂಕೋಲ, ಕಾರವಾರ, ಮಡಗಾಂವ್ ಜಂಕ್ಷನ್, ಕುಡಾಲ್, ರತ್ನಗಿರಿ, ಚಿಪ್ಳೂಣ್, ಪನ್ವೇಲ್ ಹಾಗೂ ಠಾಣೆ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಮುಂಬಯಿಯಿಂದ ಬರುವಾಗ ಇವುಗಳೊಂದಿಗೆ ಮಂಗೋನ್ ಹಾಗೂ ಖೇಡ್ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆ ಇರುತ್ತದೆ.

ಈ ರೈಲು ಒಟ್ಟು 22 ಎಲ್‌ಎಚ್‌ಬಿ ಕೋಚ್‌ಗಳನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಎರಡು ಟೂ ಟಯರ್ ಎಸಿ, ಮೂರು ತ್ರಿಟಯರ್ ಎಸಿ, 10 ಸ್ಲೀಪರ್ ಕೋಚ್, ಐದು ಸೆಕೆಂಡ್ ಸೀಟಿಂಗ್ ಕೋಚ್, ಎರಡು ಎಸ್‌ಎಲ್‌ಆರ್ ಇರಲಿವೆ.

ಮೊದಲೇ ಶೀಟು ರಿಸರ್ವ್ ಮಾಡಿ ಈ ರೈಲಿನಲ್ಲಿ ಪ್ರಯಾಣಿಸಬೇಕಿದೆ. ಪ್ರಯಾಣಿಕರು ಕಡ್ಡಾಯ ಮಾಸ್ಕ್ ಧರಿಸಿ, ಸುರಕ್ಷತಾ ಅಂತರ ಕಾಪಾಡುವುದು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಆರ್.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News