ಕೋವಿಡ್‌ನಿಂದ ಮೃತಪಟ್ಟವರ ಮಕ್ಕಳ ಸಂಪೂರ್ಣ ಶುಲ್ಕ ಮನ್ನಾ: ಮಾಹೆಯಿಂದ ಘೋಷಣೆ
ಮಣಿಪಾಲ, ಜೂ.9: ಕೋವಿಡ್‌ನಿಂದ ಸಂಪಾದನೆಯ ಏಕೈಕ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬದ ವಿದ್ಯಾರ್ಥಿಯ ಉಳಿದ ಸಂಪೂರ್ಣ ಶುಲ್ಕವನ್ನು ಮನ್ನಾ ಮಾಡುವುದಾಗಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಘೋಷಿಸಿದೆ.
ಮಾಹೆಯಲ್ಲಿ ಕಲಿಯುತ್ತಿರುವ ಇಂಥ ವಿದ್ಯಾರ್ಥಿಗಳ ತಂದೆ ಅಥವಾ ತಾಯಿ ಕೋವಿಡ್ ಸಾಂಕ್ರಾಮಿಕಕ್ಕೆ ಬಲಿಯಾಗಿದ್ದರೆ, ಆ ವಿದ್ಯಾರ್ಥಿಯ ಶುಲ್ಕವನ್ನು ಸ್ಕಾಲರ್‌ಶಿಪ್ ಎಂದು ಪರಿಗಣಿಸಿ ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಮಾಹೆ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಥ ವಿದ್ಯಾರ್ಥಿಯ ಬಾಕಿ ಉಳಿದಿರುವ ಅವಧಿಯ ಸಂಪೂರ್ಣ ಶುಲ್ಕವನ್ನು ಸ್ಕಾಲರ್‌ಶಿಪ್ ರೂಪದಲ್ಲಿ ಪರಿಗಣಿಸಿ ಅದನ್ನು ಮನ್ನಾ ಮಾಡಲಾಗುತ್ತದೆ. ಇದು ಎಲ್ಲಾ ಕೋರ್ಸ್‌ಗಳಿಗೂ ಅನ್ವಯಿಸುತ್ತದೆ. ಈ ಮೂಲಕ ಮಾಹೆಯಲ್ಲಿ ಕಲಿಯುತ್ತಿರುವ ಯಾವುದೇ ವಿದ್ಯಾರ್ಥಿ ಆರ್ಥಿಕ ಸಂಕಷ್ಟದ ಕಾರಣಕ್ಕೆ ಕಲಿಕೆಯನ್ನು ಅರ್ಧದಲ್ಲೇ ನಿಲ್ಲಿಸದಂತೆ ನೋಡಿಕೊಳ್ಳಲಾಗುವುದು ಎಂದು ಅದು ಹೇಳಿದೆ.
ಮಾಹೆ ಈ ನಿರ್ಧಾರದ ಮೂಲಕ, ಸ್ಕಾಲರ್‌ಶಿಪ್ ರೂಪದಲ್ಲಿ ವಿದ್ಯಾರ್ಥಿಯ ಸಂಪೂರ್ಣ ಶುಲ್ಕವನ್ನು ಮನ್ನಾ ಮಾಡಲಿದೆ. ಈ ಮೂಲಕ ಕುಟುಂಬದ ಏಕೈಕ ಸಂಪಾದಿಸುವ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನ ನೀಡಲು ಮಾಹೆ ಪ್ರಯತ್ನಿಸುತ್ತದೆ ಎಂದು ಮಾಹೆಯ ಕುಲಪತಿ ಲೆ.ಜ.ಡಾ.ಎಂ.ಡಿ. ವೆಂಕಟೇಶ್ ಹಾಗೂ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಹೇಳಿದ್ದಾರೆ.