×
Ad

​ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಸಿಎಫ್‌ಐ ಜನಾಂದೋಲನ

Update: 2021-06-09 23:06 IST

ಮಂಗಳೂರು, ಜೂ.9: ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಮೆಡಿಕಲ್ ಮಾಫಿಯಾವನ್ನು ಬಗ್ಗು ಬಡಿಯಬೇಕಾದರೆ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕಾಗಿದೆ. ಅದಕ್ಕಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜನಾಂದೋಲನ ರೂಪಿಸಲಿದೆ ಎಂದು ಸಿಎಫ್‌ಐ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರಿನಲ್ಲಿ ಮೆಡಿಕಲ್ ಮಾಫಿಯಾ ಹೊಸತೇನಲ್ಲ. ಜನ ಸಾಮಾನ್ಯರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ತೆರಳಲು ಭಯವಾಗುತ್ತದೆ. ಅಲ್ಲದೆ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವು ಮರೀಚಿಕೆಯಾಗಿದೆ. ಈ ಪರಿಸ್ಥಿತಿಯನ್ನು ಜನಾಂದೋಲನದ ಮೂಲಕ ಬದಲಾವಣೆಗೊಳಿಸಬೇಕಾಗಿದೆ ಎಂದರು.

ಮಂಗಳೂರಿನ ಹೆಸರಾಂತ ಎಲ್ಲಾ ಮೆಡಿಕಲ್ ಕಾಲೇಜುಗಳು ಹಾಗೂ ಆಸ್ಪತ್ರೆಗಳನ್ನು ಕಾರ್ಪೊರೇಟ್ ವ್ಯಕ್ತಿಗಳು ನಡೆಸುತ್ತಿದೆ. ಆದರೆ ಜಿಲ್ಲೆಯಲ್ಲಿ ಸರಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸರಕಾರಿ ಮೆಡಿಕಲ್ ಕಾಲೇಜು ಇಲ್ಲ. ಇದರಿಂದಾಗಿ ಹಲವಾರು ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪುತ್ತೂರು ತಾಲೂಕಿನಲ್ಲಿ ಮೆಡಿಕಲ್ ಕಾಲೇಜಿಗಾಗಿ ಕಾಯ್ದಿರಿಸಿದ ಸ್ಥಳದಲ್ಲಿ ಕೆಲವೊಂದು ಕಾಣದ ಕೈಗಳ, ಕಾರ್ಪೊರೇಟ್ ಕುಳಗಳ ಕುಮ್ಮಕ್ಕಿನಿಂದ ‘ಸೀ ಫುಡ್ ಪಾರ್ಕ್ ನಿರ್ಮಿಸಲು ಸಿದ್ಧತೆ ನಡೆಸಿದ್ದರು. ಆವಾಗಲೂ ಸಿಎಫ್‌ಐ ಅದರ ವಿರುದ್ಧ ಹೋರಾಟ ನಡೆಸಿತ್ತು. ಆದಾಗ್ಯೂ ಆ ಸ್ಥಳದಲ್ಲಿ ಇನ್ನೂ ಕೂಡ ಮೆಡಿಕಲ್ ಕಾಲೇಜು ಸ್ಥಾಪನೆಯ ಬಗ್ಗೆ ಸರಕಾರ ಮುತುವರ್ಜಿ ವಹಿಸುತ್ತಿಲ್ಲ ಎಂದು ಸವಾದ್ ಕಲ್ಲರ್ಪೆ ಆರೋಪಿಸಿದರು.

ಜಿಲ್ಲೆಯ ಬಹುತೇಲ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ನೋಂದಣಿಗಿಂತ ಮುಂಚೆಯೇ ಸೀಟ್‌ಗಳು ಮುಗಿದಿರುತ್ತದೆ. ಎಲ್ಲಾ ಸೀಟ್‌ಗಳನ್ನು ಏಜೆಂಟ್‌ಗಳು ಖರೀದಿಸಿ ಲಕ್ಞಾಂತರ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದ ಸವಾದ್ ಕಲ್ಲರ್ಪೆ, ಗರ್ಭಿಣಿಯನ್ನು ಏಳೆಂಟು ಆಸ್ಪತ್ರೆಗಳಿಗೆ ಅಲೆದಾಡುವಂತೆ ಮಾಡಿದ ಅಮಾನವೀಯ ಹಾಗೂ ಪೈಶಾಚಿಕ ಘಟನೆಯೂ ಮಂಗಳೂರಲ್ಲಿ ನಡೆದಿದೆ. ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ ಈ ಘಟನೆಯನ್ನು ಸಿಎಫ್‌ಐ ಖಂಡಿಸುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಿಎಫ್‌ಐ ಜಿಲ್ಲಾ ಮುಖಂಡರಾದ ಸಿರಾಜ್ ಮಂಗಳೂರು, ಅರ್ಫೀದ್ ಅಡ್ಕಾರ್, ಮಂಗಳೂರು ನಗರ ಜಿಲ್ಲಾಧ್ಯಕ್ಷ ಇನಾಯತ್ ಮಂಗಳೂರು, ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸರಫುದ್ದೀನ್ ಮಂಗಳೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News