×
Ad

​ಮಂಗಳೂರು ಮನಪಾ ವ್ಯಾಪ್ತಿ: ಕೋವಿಡ್ ಪರೀಕ್ಷೆ ಹೆಚ್ಚಿಸಲು ಅಧಿಕಾರಿಗಳಿಗೆ ಮೇಯರ್ ಸೂಚನೆ

Update: 2021-06-09 23:18 IST

ಮಂಗಳೂರು, ಜೂ.9: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕೋವಿಡ್ 19 ಪಾಸಿಟಿವ್ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲು ಮೇಯರ್ ಪ್ರೇಮಾನಂದ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮನಪಾ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿದ ಮೇಯರ್, ಮನಪಾ ವ್ಯಾಪ್ತಿಯಲ್ಲಿ ಪ್ರಸ್ತುತ 1,226 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 50ಕ್ಕೂ ಅತೀ ಹೆಚ್ಚು ಪ್ರಕರಣಗಳಿರುವ 2 ವಾರ್ಡ್ ಕಂಡು ಬಂದಿದೆ. ನಗರ ವ್ಯಾಪ್ತಿಯಲ್ಲಿ ಶೇ.17ರಷ್ಟು ಕೋವಿಡ್ ಸೋಂಕಿತರ ಪ್ರಮಾಣ ವರದಿಯಾಗುತ್ತಿದ್ದು, ಈ ಸೋಂಕಿತ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸುವುದು ಅನಿವಾರ್ಯವಾದ ಹಿನ್ನಲೆಯಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಬೇಕು ಎಂದರು.

ಸಂಚಾರಿ ಗಂಟಲು ದ್ರವ ಪರೀಕ್ಷೆ ವ್ಯವಸ್ಥೆಯಡಿ ಪಾಲಿಕೆಯಿಂದ ಪ್ರತ್ಯೇಕವಾಗಿ ಸಹಾಯವಾಣಿ ಕೇಂದ್ರವನ್ನು ತೆರೆಯುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕೋವಿಡ್ ಪರೀಕ್ಷೆಗೆ ಸಂಬಂಧಿಸಿ ಪ್ರತ್ಯೇಕವಾದ ದೂರವಾಣಿ ಸಂಖ್ಯೆಯನ್ನು ನಿಗದಿಪಡಿಸಿಕೊಂಡು ‘ಕೋವಿಡ್ ಪರೀಕ್ಷೆಗಾಗಿ ಸಂಪರ್ಕಿಸಿ’ ಎಂಬ ಕಾರ್ಯಾಚರಣೆಯನ್ನು ಎರಡು ದಿನಗಳೊಳಗಾಗಿ ಪ್ರಾರಂಭಿಸುವಂತೆ ಮೇಯರ್ ಸೂಚಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರಿ ಗಂಟಲು ದ್ರವ ಪರೀಕ್ಷೆ ವ್ಯವಸ್ಥೆಯನ್ನು ಪ್ರಾರಂಭಿಸಲು 6 ತಂಡಗಳನ್ನು ರಚಿಸಲಾಗಿದೆ. ಈ ತಂಡದಲ್ಲಿರುವ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ ಶೀಘ್ರ ಪರೀಕ್ಷೆ ಆರಂಭಿಸಲಾಗುವುದು ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ. ಅಶೋಕ್ ತಿಳಿಸಿದರು.

ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸುವ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಇಂದು 78 ಅಂಗಡಿಗಳಿಗೆ 68,350 ರೂ. ದಂಡ ವಿಧಸಲಾಗಿದೆ. ಅಲ್ಲದೆ 30 ಅಂಗಡಿಗಳ ಉದ್ದಿಮೆ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಅನಗತ್ಯವಾಗಿ ಒಡಾಡಿದ 19 ಪ್ರಕರಣಕ್ಕೆ ಸಂಬಂಧಿಸಿ 8050 ರೂ. ದಂಡ ವಿಧಿಸಲಾಗಿದೆ ಎಂದು ಆಯುಕ್ತ ಅಕ್ಷಯ್ ಶ್ರೀಧರ್ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಡಳಿತದ ನಿರ್ದೇಶನದಂತೆ ಆನ್‌ಲೈನ್ ನೋಂದಣಿದಾರರಿಗೆ ಹಾಗೂ ಆದ್ಯತಾ ವಲಯವನ್ನು ಕೇಂದ್ರೀಕರಿಸಿಕೊಂಡು ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭಂಡಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News