ದ.ಕ.ಜಿಲ್ಲೆಯಲ್ಲಿ ಗುರುವಾರ 3 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ: ಇಬ್ಬರು ಬಲಿ
ಮಂಗಳೂರು, ಜೂ.10: ದ.ಕ. ಜಿಲ್ಲೆಯಲ್ಲಿ ಗುರುವಾರ ಹೊಸತಾಗಿ 3 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದರೆ, ಇಬ್ಬರು ಬಲಿಯಾಗಿದ್ದಾರೆ. ಪತ್ತೆಯಾದ ಮೂರು ಹೊಸ ಪ್ರಕರಣವು ಉತ್ತರ ಕನ್ನಡ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗೆ ಸಂಬಂಧಿಸಿದ್ದಾಗಿದ್ದು, ಎಲ್ಲರೂ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅದಲ್ಲದೆ ಗುರುವಾರ ಬ್ಲ್ಯಾಕ್ ಫಂಗಸ್‌ಗೆ ಇಬ್ಬರು ಬಲಿಯಾಗಿದ್ದಾರೆ. ಆ ಪೈಕಿ ಒಬ್ಬರು ಚಿಕ್ಕಮಗಳೂರು ಮತ್ತು ಇನ್ನೊಬ್ಬರು ಉತ್ತರ ಕನ್ನಡ ಜಿಲ್ಲೆಗೆ ಸೇರಿದವರಾಗಿದ್ದು, ಇಬ್ಬರೂ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ದ.ಕ.ಜಿಲ್ಲೆಯಲ್ಲಿ ಸದ್ಯ 54 ಬ್ಲ್ಯಾಕ್ ಫಂಗಸ್ ಸಕ್ರಿಯ ಪ್ರಕರಣಗಳು ಇದೆ. ಇದರಲ್ಲಿ 11 ದ.ಕ.ಜಿಲ್ಲೆಗೆ ಮತ್ತು 43 ಪ್ರಕರಣಗಳು ಹೊರಜಿಲ್ಲೆಗೆ ಸಂಬಂಧಿಸಿದ್ದಾಗಿದೆ. ಅಂದರೆ ನಗರದ ಜ್ಯೋತಿಯ ಕೆಎಂಸಿಯಲ್ಲಿ ದ.ಕ.ಜಿಲ್ಲೆಯ ಒಬ್ಬರು, ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಹೊರ ಜಿಲ್ಲೆಯ ನಾಲ್ಕು ಮತ್ತು ದ.ಕ.ಜಿಲ್ಲೆಯ ಒಬ್ಬರು, ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹೊರ ಜಿಲ್ಲೆಯ ಒಬ್ಬರು, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದ.ಕ.ಜಿಲ್ಲೆಯ ಇಬ್ಬರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರ ಜಿಲ್ಲೆಯ 37 ಮತ್ತು ದ.ಕ.ಜಿಲ್ಲೆಯ 6 ಮಂದಿ, ಮಂಗಳಾ ಆಸ್ಪತ್ರೆಯಲ್ಲಿ ಹೊರ ಜಿಲ್ಲೆಯ ಒಬ್ಬರು, ಎ.ಜೆ.ಆಸ್ಪತ್ರೆಯಲ್ಲಿ ದ.ಕ.ಜಿಲ್ಲೆಯ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೆ ಹೊರ ಜಿಲ್ಲೆಯ ನಾಲ್ಕು ಮಂದಿ ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಲ್ಲದೆ ಬ್ಲ್ಯಾಕ್ ಫಂಗಸ್ ಲಕ್ಷಣ ಹೊಂದಿದ್ದ ದ.ಕ.ಜಿಲ್ಲೆಯ ಇಬ್ಬರು ಮತ್ತು ಹೊರ ಜಿಲ್ಲೆಯ 10 ಮಂದಿಯ ಸಹಿತ ಒಟ್ಟು 12 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ.