​ಲಾಕ್‌ಡೌನ್ ವಿಸ್ತರಣೆಗೆ ಡಿವೈಎಫ್‌ಐ ವಿರೋಧ

Update: 2021-06-10 15:55 GMT

ಮಂಗಳೂರು, ಜೂ.10: ಕೊರೋನ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ದ.ಕ. ಜಿಲ್ಲೆಗೆ ಸೀಮಿತವಾಗಿ ಲಾಕ್‌ಡೌನ್ ಮುಂದುವರಿಸುವ ಉಸ್ತುವಾರಿ ಸಚಿವರ ಪ್ರಸ್ತಾಪ ವಾಸ್ತವದ ಅರಿವಿಲ್ಲದ, ಜನವಿರೋಧಿ ಧೋರಣೆ ಹೊಂದಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಈಗಾಗಲೆ ಗಂಭೀರಾವಸ್ಥೆಗೆ ತಲುಪಿರುವ ಜಿಲ್ಲೆಯ ಜನರ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಲಿದೆ. ಯಾವುದೇ ಪರಿಹಾರ ಪ್ಯಾಕೇಜ್‌ಗಳಿಲ್ಲದೆ ಲಾಕ್‌ಡೌನ್ ಮುಂದುವರಿಕೆ ಸಂಪಾದನೆ ಇಲ್ಲದೆ ಕೈ ಖಾಲಿ ಮಾಡಿ ಕೂತಿರುವ ಜನರನ್ನು ಖಿನ್ನತೆ ನೂಕಲಿದೆ, ಸಾವು ನೋವುಗಳಿಗೆ ಕಾರಣವಾಗಲಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆಗಳಿಗೆ ಸೀಮಿತರಾಗದೆ ವಸ್ತು ಸ್ಥಿತಿ ಅರಿತು ತಮ್ಮ ಅವಾಸ್ತವಿಕ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕು. ಅಗತ್ಯ ನಿರ್ಬಂಧಗಳೊಂದಿಗೆ ಲಾಕ್‌ಡೌನ್ ತೆರವುಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಈಗಾಗಲೆ ಎರಡು ತಿಂಗಳ ಲಾಕ್‌ಡೌನ್‌ನಿಂದ ಕರಾವಳಿಯ ಜಿಲ್ಲೆಗಳು ತತ್ತರಿಸಿ ಹೋಗಿವೆ. ಹೆಚ್ಚಿನ ಜನರು ದಿನಸಿ ಕೊಂಡುಕೊಳ್ಳಲೂ ಆಗದ ಸ್ಥಿತಿ ತಲುಪಿದ್ದಾರೆ.

ಮನೆ ಬಾಡಿಗೆ, ಮನೆ ತೆರಿಗೆ, ಶಾಲಾ ಫೀಸು, ವಿದ್ಯುತ್ ಬಿಲ್ಗಳ ಬಾಕಿಯು ಜನರ ನೆಮ್ಮದಿ ಕೆಡಿಸಿದೆ. ಜವಳಿ, ಪಾದರಕ್ಷೆ, ಶೃಂಗಾರ,ಆಹಾರ. ಸಹಿತ ವಿವಿಧ ವ್ಯಾಪಾರಗಳಲ್ಲಿ ಬ್ಯಾಂಕ್ ಸಾಲ, ಕೈ ಸಾಲ ಮಾಡಿ ಬಂಡವಾಳ ಹಾಕಿ ಈಗ ವ್ಯಾಪಾರ ಮಾಡಲಾಗದೆ ಕೈ ಸುಟ್ಟುಕೊಂಡು ಕೂತಿರುವ ಸಾವಿರಾರು ಜನರು ಬದುಕೇ ಮುಗಿದು ಹೋದಂತೆ ಕಂಗೆಟ್ಟಿದ್ದಾರೆ. ಬಸ್, ಟ್ಯಾಕ್ಸಿ ಸಹಿತ ಸಾರ್ವಜನಿಕ ಸಾರಿಗೆಯಲ್ಲಿ ತೊಡಗಿಸಿಕೊಂಡಿರುವ ಮಾಲಕರು, ನೌಕರರು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಇವರಿಗೆ ಯಾವುದೇ ಆದಾಯ, ಪರಿಹಾರ, ರಿಯಾಯಿತಿಗಳನ್ನು ಸರಕಾರ ಘೋಷಿಸಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಸಾಮಾಜಿಕ, ಆರ್ಥಿಕ ಬಿಕ್ಕಟ್ಟುಗಳ ಕುರಿತು ಅಧ್ಯಯನಗಳನ್ನು ಮಾಡದೆ ಲಾಕ್‌ಡೌನ್ ಮುಂದುವರಿಸಲು ಉಸ್ತುವಾರಿ ಸಚಿವರು ಮುಂದಾಗಿರುವುದು ಖಂಡನೀಯ. ಜಿಲ್ಲೆಯಲ್ಲಿ ಕೊರೋನ ಪಾಸಿಟಿವಿಟಿ ದರವು ಇತರ ಜಿಲ್ಲೆಗೆ ಹೋಲಿಸಿದರೆ ಇನ್ನೂ ಹೆಚ್ಚಿರುವುದಕ್ಕೆ ಅಧಿಕಾರಿಗಳ ಜೊತೆಗೆ ತಂಡವಾಗಿ ನಿಂತು ಕಾರ್ಯಾಚರಣೆಗೆ ಇಳಿಯದ ಸಚಿವರ, ಜನಪ್ರತಿನಿಧಿಗಳ ನಿರಾಶಾದಾಯಕ ಪ್ರವೃತ್ತಿಯೂ ಪ್ರಧಾನ ಕಾರಣವಾಗಿದೆ. ಆಡಳಿತ ಪಕ್ಷದ ಬೆಂಬಲವುಳ್ಳ ಮಂಗಳೂರಿನ ಪ್ರಬಲ ಖಾಸಗಿ ಮೆಡಿಕಲ್ ಲಾಬಿ ಸರಕಾರದ ನಿಯಮಗಳನ್ನು ಸಾರಾಸಗಟಾಗಿ ಕಡೆಗಣಿಸಿ ಸೋಂಕಿತರಿಗೆ ಸರಕಾರಿ ದರದಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿ ದುಬಾರಿ ಬಿಲ್ಗಳನ್ನು ನೀಡತೊಡಗಿದ್ದೇ ಸೋಂಕಿತರು ಆಸ್ಪತ್ರೆಗಳತ್ತ ಬರಲು ಭಯ ಪಟ್ಟರಲ್ಲದೆ, ಮನೆಗಳಲ್ಲೇ ಉಳಿದು ಸೋಂಕು ವ್ಯಾಪಕಗೊಳ್ಳಲು ಕಾರಣವಾಯಿತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News