ಲಾಕ್ಡೌನ್ ಸಂದರ್ಭ ಪುತ್ರನಿಂದ ದೌರ್ಜನ್ಯಕ್ಕೆ ಒಳಗಾದ ತಂದೆಯ ಪರ ತೀರ್ಪು ನೀಡಿದ ಬಾಂಬೆ ಹೈಕೋರ್ಟ್

Update: 2021-06-10 16:43 GMT

ಮುಂಬೈ, ಜೂ.10: ತನ್ನ ಮಗನಿಂದಲೇ ನಿರಂತರ ಕಿರುಕುಳ, ನಿಂದನೆ ಮತ್ತು ಚಿತ್ರಹಿಂಸೆಯಿಂದ ಗುರಿಯಾಗಿದ್ದ ವಯೋವೃದ್ಧರ ಅರ್ಜಿಯನ್ನು ಪುರಸ್ಕರಿಸಿದ ಬಾಂಬೆ ಹೈಕೋರ್ಟ್, ತಂದೆ ವಾಸಿಸುತ್ತಿರುವ ಫ್ಲ್ಯಾಟ್  ಪ್ರವೇಶಿಸಬಾರದು ಎಂದು ಪುತ್ರನಿಗೆ ಸೂಚಿಸಿದೆ. ಅಲ್ಲದೆ ಸದ್ಯಕ್ಕೆ ಪ್ರತೀ ತಿಂಗಳು ತಂದೆ ಮಗನಿಗೆ 50,000 ರೂ. ನೀಡಬೇಕು ಎಂದು ಹೇಳಿದೆ. 

ಮಗ ತನಗೆ ಮತ್ತು ಪತ್ನಿಗೆ ನೀಡುತ್ತಿದ್ದ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ, ದೌರ್ಜನ್ಯ, ಕಿರುಕುಳದಿಂದಾಗಿ ಅಧಿಕ ರಕ್ತದೊತ್ತಡ, ಕಿಡ್ನಿ ಸಮಸ್ಯೆ ಮತ್ತಿತರ ಸಮಸ್ಯೆಯಿಂದ ಬಳಲಿದ ಪತ್ನಿ 2020ರ ಮಾರ್ಚ್ ನಲ್ಲಿ ಮೃತಳಾಗಿದ್ದಾಳೆ. ಸಮಾಜದಲ್ಲಿ ಮನೆತನದ ಗೌರವಕ್ಕೆ ಧಕ್ಕೆಯಾಗುತ್ತದೆ ಮತ್ತು ಮಗ ಮತ್ತಷ್ಟು ಹಿಂಸೆ ನೀಡಬಹುದು ಎಂಬ ಭೀತಿಯಿಂದ ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ ಲಾಕ್ಡೌನ್ ಬಳಿಕ ಕಿರುಕುಳ ಮತ್ತು ಚಿತ್ರಹಿಂಸೆ ಮಿತಿಮೀರಿದೆ ಎಂದು ವೃದ್ಧರು ಸಲ್ಲಿಸಿದ್ದ ಅರ್ಜಿಯಲ್ಲಿ ವಿವರಿಸಲಾಗಿದೆ.

ಮರೀನ್ ಡ್ರೈವ್ ನಿವಾಸಿಯಾಗಿರುವ ಈ ವ್ಯಕ್ತಿ ಟ್ರಾವೆಲ್ ವ್ಯವಹಾರ ನಡೆಸುತ್ತಿದ್ದು ಬಳಿಕ ಅದನ್ನು ಪುತ್ರನಿಗೆ ಹಸ್ತಾಂತರಿಸಿದ್ದಾರೆ. ಆದರೆ ಕಳೆದ ಸುಮಾರು 10 ವರ್ಷದಿಂದ ತಂದೆ-ಮಗನ ಮಧ್ಯೆ ಮನಸ್ತಾಪವಿದೆ ಎಂದು ಮೂಲಗಳು ಹೇಳಿವೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ವರ್ಷ ಜಾರಿಯಾದ ಲಾಕ್ಡೌನ್ ಬಳಿಕ ಮಗನಿಂದ ಕಿರುಕುಳ ಮತ್ತಷ್ಟು ಹೆಚ್ಚಿದೆ ಎಂದು ವ್ಯಕ್ತಿ ಹೇಳಿದ್ದಾರೆ. ಅಲ್ಲದೆ ಮಗ ತನ್ನನ್ನು ಹೀನಾಯವಾಗಿ ಬೈಯುವ, ದೈಹಿಕ ಹಿಂಸೆ ನೀಡುವ ವೀಡಿಯೊ ದೃಶ್ಯವನ್ನು ಹೈಕೋರ್ಟ್ಗೆ ನೀಡಿದ್ದಾರೆ. ವೀಡಿಯೊ ದಾಖಲೆ ಹಾಗೂ ಇತರ ಪುರಾವೆಗಳ ಪರಿಶೀಲನೆ ಬಳಿಕ, ತಂದೆಯ ಪರ ಹೈಕೋರ್ಟ್ ತೀರ್ಪು ನೀಡಿದೆ. 

85 ವರ್ಷದ ಹಿರಿಯ ವ್ಯಕ್ತಿ ದ್ವೇಷದ ಭಾವನೆಯಿಂದ ತನ್ನ ಪುತ್ರನನ್ನು ಮನೆಯಿಂದ ಹೊರಹಾಕುವಂತೆ ಕೇಳುತ್ತಿಲ್ಲ. ತನ್ನ ಅಂತಿಮ ದಿನಗಳನ್ನು ಶಾಂತಿಯಿಂದ ಕಳೆಯಬೇಕೆಂದು ಬಯಸುತ್ತಿದ್ದಾರೆ. ಈ ಕೋರಿಕೆಯನ್ನು ನಾವು ಪರಿಗಣಿಸಬೇಕಾಗಿದೆ. ಅಲ್ಲದೆ, ಮಗನಿಗೆ ಬೇರೆಡೆ ವಾಸ್ತವ್ಯ ಹೂಡಲು 25 ಲಕ್ಷ ರೂ. ನೀಡುವ ಉದಾರತೆಯನ್ನೂ ತೋರಿದ್ದಾರೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News