ಕೇರಳದಲ್ಲಿ ಲಸಿಕೆ ಉತ್ಪಾದನೆ ಘಟಕ ಆರಂಭಿಸಲು ನಿರ್ಧಾರ

Update: 2021-06-10 17:02 GMT

ತಿರುವನಂತಪುರಂ, ಜೂ.10: ಸರಕಾರದ ಅಧೀನದಲ್ಲಿರುವ ಜೀವವಿಜ್ಞಾನ ಪಾರ್ಕ್ ನಲ್ಲಿ ಲಸಿಕೆ ಉತ್ಪಾದಿಸುವ ಘಟಕ ಆರಂಭಕ್ಕೆ ಕ್ರಮ ಕೈಗೊಳ್ಳಲು ಗುರುವಾರ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈ ನಿಟ್ಟಿನಲ್ಲಿ ದೇಶದ ಪ್ರಮುಖ ಲಸಿಕೆ ಉತ್ಪಾದನಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲು ಕಾರ್ಯಪಡೆಯೊಂದನ್ನು ರಚಿಸಲಾಗಿದ್ದು ಐಎಎಸ್ ಅಧಿಕಾರಿ ಡಾ. ಎಸ್. ಚಿತ್ರಾ ಪ್ರಸ್ತಾವಿತ ಯೋಜನೆಯ ಯೋಜನಾ ನಿರ್ದೇಶಕಿಯಾಗಲಿದ್ದಾರೆ ಎಂದು ವರದಿ ತಿಳಿಸಿದೆ. 

ರಾಜ್ಯದಲ್ಲಿನ ಕೋವಿಡ್ ಸೋಂಕಿನ ಸ್ಥಿತಿಗತಿ ಬಗ್ಗೆ ಗುರುವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಪೊಸಿಟಿವ್ ಪ್ರಮಾಣ ಹೆಚ್ಚು ಇರುವ ಕಡೆಗಳಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸಲು ನಿರ್ಧರಿಸಲಾಗಿದೆ. ಲಸಿಕೀಕರಣ ಪ್ರಕ್ರಿಯೆ ಸೂಚಿತ ಕ್ರಮದಂತೆ ನಡೆಯುವುದನ್ನು ಆರೋಗ್ಯ ಇಲಾಖೆ ಖಾತರಿಪಡಿಸಬೇಕು ಮತ್ತು ಮನೆಯಲ್ಲಿ ಪ್ರತ್ಯೇಕವಾಗಿ ಇರುವ ವ್ಯವಸ್ಥೆ ಇಲ್ಲದ ಕೊರೋನ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ಕರೆದೊಯ್ಯಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಬುಧವಾರ ಕೇರಳದಲ್ಲಿ 16,204 ಕೊರೋನ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News