ಕಾಪು: ಪೆಟ್ರೋಲ್ ಬಂಕ್ ಮಾಲಕನಿಗೆ 18 ಲಕ್ಷ ರೂ. ವಂಚಿಸಿದ ಮ್ಯಾನೇಜರ್; ಪ್ರಕರಣ ದಾಖಲು

Update: 2021-06-10 17:23 GMT

ಕಾಪು: ಮೂಳೂರಿನ ಪೆಟ್ರೋಲ್ ಬಂಕ್ ಮಾಲಕನಿಗೆ ಮ್ಯಾನೇಜರ್ 18 ಲಕ್ಷ ರೂ. ವಂಚಿಸಿರುವ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿರುವ ಭಾರತ್ ಪೆಟ್ರೋಲ್ ಬಂಕ್‍ನ ಉದ್ದಿಮೆಯನ್ನು ನಡೆಸುತ್ತಿರುವ ಕೆ.ದೀಪಕ್‍ರಾಜ್ ಶೆಟ್ಟಿ ಎಂಬವರು ಬಂಕ್‍ನ ಮ್ಯಾನೇಜರ್ ಆಗಿದ್ದ ಸುಖೇಶ್ ಶೆಟ್ಟಿ ಎಂಬವರ ವಿರುದ್ಧ ಕಾಪು ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. 

ಪೆಟ್ರೋಲ್ ಬಂಕ್‍ನ ಹಣವನ್ನು ಕಾರ್ಡ್ ಮೂಲಕ ಮತ್ತು ನಗದು ರೀತಿಯಲ್ಲಿ ಬ್ಯಾಂಕಿಗೆ ಸುಖೇಶ್ ಶೆಟ್ಟಿಯು ಜಮಾ ಮಾಡಿಕೊಂಡು ಬರುತ್ತಿದ್ದು, ಜಮಾ ಮಾಡಿದ ಹಣದಲ್ಲಿ ವ್ಯತ್ಯಾಸ ಬಂದಿರುವುದಾಗಿ ಕಂಪನಿಯವರು ಕೆ.ದೀಪಕ್‍ರಾಜ್ ಶೆಟ್ಟಿರವರಿಗೆ ತಿಳಿಸಿದ್ದಾರೆ. ಈ ಬಗ್ಗೆ ಸುಖೇಶ್ ಬಳಿ ವಿಚಾರಿಸಿದಾಗ ಈ ಬಗ್ಗೆ ಪರಿಶೀಲಿಸಿ ತಿಳಿಸುವುದಾಗಿ ಹೇಳಿ ತನ್ನ ಮೊಬೈಲ್‍ನ್ನು ಸ್ವಿಚ್ ಆಫ್ ಮಾಡಿ ಮೇ 27 ರಂದು ಸಂಜೆ ಪೆಟ್ರೋಲ್ ಬಂಕ್‍ನಿಂದ ತೆರಳಿದ್ದಾನೆನ್ನಲಾಗಿದೆ.

ಮೇ 28 ರಂದು ಕೆ. ದೀಪಕ್‍ರಾಜ್ ಶೆಟ್ಟಿರವರು ಪೆಟ್ರೋಲ್ ಬಂಕ್‍ಗೆ ಬಂದು ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಸುಮಾರು 18,00,000 ರೂ. ವ್ಯತ್ಯಾಸ ಕಂಡು ಬಂದಿರುತ್ತದೆ. ಅಲ್ಲದೆ ಸುಖೇಶನು ಬ್ಯಾಂಕಿಗೆ ಸಂಬಂಧಪಟ್ಟ ಅಕೌಂಟ್ ಪುಸ್ತಕಗಳನ್ನು ಕೊಂಡೊಯ್ದಿದ್ದಾನೆ. ಈ ಬಗ್ಗೆ ಸುಖೇಶ್ ಶೆಟ್ಟಿಯು ಪೆಟ್ರೋಲ್ ಬಂಕ್‍ನ ಹಣವನ್ನು ಬ್ಯಾಂಕಿಗೆ ಸರಿಯಾಗಿ ಜಮಾ ಮಾಡದೇ ಮೋಸ ಮಾಡಿ ಪೆಟ್ರೋಲ್ ಬಂಕ್‍ನ ವ್ಯವಹಾರದಲ್ಲಿ ಸುಮಾರು 18 ಲಕ್ಷ ರೂಪಾಯಿಗಳು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಮೋಸ ಮಾಡಿರುವುದಾಗಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News