ಅಮೆರಿಕಾದಲ್ಲಿ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ತುರ್ತು ಬಳಕೆ ಅನುಮೋದನೆಗೆ ಎಫ್‍ಡಿಎ ನಕಾರ

Update: 2021-06-11 09:10 GMT

ಹೊಸದಿಲ್ಲಿ: ಅಮೆರಿಕಾದ ಫುಡ್ ಎಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (ಎಫ್‍ಡಿಎ) ಭಾರತ್ ಬಯೋಟೆಕ್ ನ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದನೆ ನೀಡುವ  ಪ್ರಸ್ತಾವನೆಯನ್ನು  ತಿರಸ್ಕರಿಸಿದೆ. ಇದರಿಂದಾಗಿ ಭಾರತ್ ಬಯೋಟೆಕ್‍ನ ಕೊವ್ಯಾಕ್ಸಿನ್ ಲಸಿಕೆ ಅಮೆರಿಕಾದಲ್ಲಿ ಬಿಡುಗಡೆಗೊಳ್ಳುವುದು ಇನ್ನಷ್ಟು ವಿಳಂಬವಾಗಲಿದೆ. ಭಾರತ್ ಬಯೋಟೆಕ್‍ನ ಅಮೆರಿಕಾದ ಪಾಲುದಾರ ಒಕ್ಯುಜನ್  ಗುರುವಾರ ಈ ಕುರಿತು ಪ್ರತಿಕ್ರಿಯಿಸಿ, ಕಂಪೆನಿಯು ಕೊವ್ಯಾಕ್ಸಿನ್ ಬಳಕೆಗೆ ಸಂಪೂರ್ಣ ಅನುಮೋದನೆ ಕೋರಲಿದೆ ಎಂದು ಹೇಳಿದೆ.

ಪೂರ್ಣ ಅನುಮೋದನೆಗಾಗಿ ಬಯೊಲಾಜಿಕ್ಸ್ ಲೈಸನ್ಸ್ ಅಪ್ಲಿಕೇಶನ್‍ಗೆ ಕಂಪೆನಿ ಅರ್ಜಿ ಸಲ್ಲಿಸುವಂತಾಗಲು ಹೆಚ್ಚುವರಿ ಟ್ರಯಲ್ ನಡೆಸುವಂತೆ ಎಫ್‍ಡಿಎ ಸಂಸ್ಥೆಗೆ ಹೇಳಿದೆ. ಅರ್ಜಿ ಅನುಮೋದನೆಗೆ ಅಗತ್ಯವಿರುವ ಹೆಚ್ಚುವರಿ ದಾಖಲೆಗಳ ಕುರಿತು ಕಂಪೆನಿ ಈಗ ಎಫ್‍ಡಿಎ ಜತೆಗೆ ಮಾತುಕತೆ ನಡೆಸುತ್ತಿದೆ.

ಭಾರತದ ಲಸಿಕೆ ಅಭಿಯಾನದಲ್ಲಿ ಸೇರ್ಪಡೆಗೊಂಡು ಆರು ತಿಂಗಳ ನಂತರವೂ ಭಾರತ್ ಬಯೋಟೆಕ್ ತನ್ನ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ದತ್ತಾಂಶಗಳನ್ನು ಬಿಡುಗಡೆಗೊಳಿಸದೇ ಇರುವುದಕ್ಕೆ ಈಗಾಗಲೇ ಟೀಕೆಗೊಳಗಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಅಮೆರಿಕಾದಲ್ಲಿ ತುರ್ತು ಬಳಕೆಗೆ ಅನುಮೋದನೆ ಕೋರುವ ವೇಳೆ  ಕೊವ್ಯಾಕ್ಸಿನ್ ಮಾರ್ಚ್ ನಲ್ಲಿ ಟ್ರಯಲ್ ನ ಭಾಗಶಃ ಡಾಟಾ ಮಾತ್ರ ಸಲ್ಲಿಸಿದ್ದರಿಂದ ಅನುಮೋದನೆ ದೊರಕಿಲ್ಲ ಎನ್ನಲಾಗಿದೆ.

ಈ ಬೆಳವಣಿಗೆ ಕುರಿತು ಭಾರತದಲ್ಲಿ ಭಾರತ್ ಬಯೋಟೆಕ್ ಇನ್ನೂ ಪ್ರತಿಕ್ರಿಯಿಸಿಲ್ಲ. ಭಾರತದಲ್ಲಿ ಕೂಡ ತನ್ನ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಡಾಟಾ ಬಿಡುಗಡೆಗೊಳಿಸುವ ಸಮಯಮಿತಿಯನ್ನು ಕಂಪೆನಿ ವಿಳಂಬಿಸಿದೆ. ಮೊದಲು ಜೂನ್ ತಿಂಗಳಲ್ಲಿ ಬಿಡುಗಡೆಗೊಳಿಸುವುದಾಗಿ ಹೇಳಿದ್ದ ಕಂಪೆನಿ ಈಗ ಜುಲೈ ತಿಂಗಳಲ್ಲಿ ಬಿಡುಗಡೆಗೊಳಿಸುವುದಾಗಿ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News