ಟಿಎಂಸಿ ತೆಕ್ಕೆಗೆ ವಾಪಸಾದ ಬಿಜೆಪಿ ಮುಖಂಡ ಮುಕುಲ್ ರಾಯ್

Update: 2021-06-11 11:59 GMT

ಕೋಲ್ಕತಾ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರವಾಗಿದ್ದ ಮೊದಲ ಪ್ರಮುಖ ನಾಯಕ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಅವರು ಶುಕ್ರವಾರ ಟಿಎಂಸಿಗೆ ವಾಪಸಾಗಿದ್ದಾರೆ.

"ಮುಕುಲ್ ಮನೆಗೆ ಮರಳಿದ್ದಾರೆ''ಎಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ,"ರಾಯ್  ಅವರು ಎಂದಿಗೂ ಇತರರಂತೆ ದೇಶದ್ರೋಹಿ ಆಗಿರಲಿಲ್ಲ'' ಎಂದು ಹೇಳಿದರು.

"ಬಿಜೆಪಿಯನ್ನು ತೊರೆದ ನಂತರ ನನ್ನ ಹಳೆಯ ಸಹೋದ್ಯೋಗಿಗಳನ್ನು ನೋಡಿದಾಗ ನನಗೆ ತುಂಬಾ ಖುಷಿ ಆಗಿದೆ. ನಾನು ಬಿಜೆಪಿಯಲ್ಲಿ ಇರಲು ಸಾಧ್ಯವಿಲ್ಲ.ಬಂಗಾಳ ಮತ್ತು ಭಾರತಕ್ಕೆ ಮಮತಾ ಬ್ಯಾನರ್ಜಿ ಅವರೇ  ಏಕೈಕ ನಾಯಕಿ" ಎಂದು ರಾಯ್ ಬಣ್ಣಿಸಿದರು.

 ಈ ಹಿಂದೆ "ದೀದಿ" ಯ ಮೇಲೆ ಪದೇ ಪದೇ  ವಾಗ್ದಾಳಿ ನಡೆಸಿದ್ದೀರಲ್ಲ ಎಂಬ ಅಹಿತಕರ ಪ್ರಶ್ನೆಗೆ, ಉತ್ತರಿಸಿದ ರಾಯ್: "ಮಮತಾ ಬ್ಯಾನರ್ಜಿಯೊಂದಿಗೆ ನನಗೆ ಯಾವತ್ತೂ ಭಿನ್ನಾಭಿಪ್ರಾಯಗಳಿರಲಿಲ್ಲ'' ಎಂದರು.

ಇತ್ತೀಚೆಗೆ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ರಾಯ್ ಅವರನ್ನು ಟಿಎಂಸಿಗೆ ಸ್ವಾಗತಿಸಲು ಮಮತಾ ಬ್ಯಾನರ್ಜಿ, ಅವರ ಅಳಿಯ, ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಪಾರ್ಥ ಚಟರ್ಜಿ, ಸುಬ್ರತಾ ಮುಖರ್ಜಿ ಹಾಗೂ ಸುಬ್ರತಾ ಬಕ್ಷಿ ಸಹಿತ ತೃಣಮೂಲದ ಎಲ್ಲ ಪ್ರಮುಖ ನಾಯಕರು ಹಾಜರಿದ್ದರು.

ಶುಕ್ರವಾರ ಮಧ್ಯಾಹ್ನ  ಟಿಎಂಸಿ ಪ್ರಧಾನ ಕಚೇರಿ ತೃಣಮೂಲ ಭವನಕ್ಕೆ ಪುತ್ರ ಶುಭ್ರಂಶು ಅವರೊಂದಿಗೆ ಭೇಟಿ ನೀಡಿದ ರಾಯ್  ಹಲವು ವಾರಗಳಿಂದ ಕೇಳಿಬರುತ್ತಿರುವ ಊಹಾಪೋಹಕ್ಕೆ ತೆರೆ ಎಳೆದರು.

2017 ರಲ್ಲಿ ಬಿಜೆಪಿಗೆ ಸೇರಿದ್ದ ಮುಕುಲ್ ರಾಯ್ ಅವರು ಕಳೆದ ಕೆಲವು ದಿನಗಳಿಂದ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು.

ಬಿಜೆಪಿ ಪಕ್ಷದಲ್ಲಿ "ಉಸಿರುಗಟ್ಟಿದ ವಾತಾವರಣ"  ಇದೆ ಎಂಬ ಬಗ್ಗೆ ಮುಕುಲ್ ರಾಯ್ ನಿಕಟವರ್ತಿಗಳಿಗೆ ತಿಳಿಸಿದ್ದರು ಎಂದು ಮೂಲಗಳು ತಿಳಿಸಿವೆ. ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಸೋಲಿನಿಂದ ಅವರ ಹತಾಶೆ ಹೆಚ್ಚಾಯಿತು.

ತೃಣಮೂಲ ಕಾಂಗ್ರೆಸ್ ನ ಸಂಸ್ಥಾಪಕ ಸದಸ್ಯ ಮುಕುಲ್ ರಾಯ್ ಅವರು ಟಿಎಂಸಿ ತ್ಯಜಿಸಿದಾಗ ಅದರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಈ ಹುದ್ದೆಯು ಈಗ ಮುಖ್ಯಮಂತ್ರಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿಗೆ ಪಾಲಾಗಿದೆ.

ಮಮತಾ ಬ್ಯಾನರ್ಜಿ ಅವರ ಮಾಜಿ  ಆಪ್ತ ಸುವೇಂದು  ಅಧಿಕಾರಿಯವರ ಮೇಲೆ ರಾಯ್ ಅಸಮಾಧಾನವಿದೆ ಎನ್ನಲಾಗಿದೆ.  ಅಧಿಕಾರಿ ಅವರು ಡಿಸೆಂಬರ್ ನಲ್ಲಿ ಪಕ್ಷಕ್ಕೆ ಸೇರಿದ ನಂತರ ಶೀಘ್ರವಾಗಿ ಬಿಜೆಪಿಗೆ ಹೆಚ್ಚು ಆಪ್ತರಾದರು.

ಬಂಗಾಳ ಚುನಾವಣೆಗೆ ಮುಂಚಿತವಾಗಿ ಅಧಿಕಾರಿಯ ಹಾದಿ ಅನುಸರಿಸಿದ್ದ ಅನೇಕ ಮಾಜಿ ತೃಣಮೂಲ ನಾಯಕರು ಮರಳಿ ಬರಲು ಬಯಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಮುಕುಲ್ ರಾಯ್ ನಂತರ, ತೃಣಮೂಲವು "ತನ್ನ ಬಾಗಿಲನ್ನು ಮುಚ್ಚುತ್ತದೆ" ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News