ಅಂಪೈರ್ ರೊಂದಿಗೆ ವಾಗ್ವಾದ ನಡೆಸಿ ಸ್ಟಂಪ್ ಅನ್ನು ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್ ಶಾಕಿಬ್ ಅಲ್ ಹಸನ್!

Update: 2021-06-11 12:49 GMT

ಢಾಕಾ: ಢಾಕಾ ಪ್ರೀಮಿಯರ್ ಡಿವಿಜನ್  ಟ್ವೆಂಟಿ -20 ಕ್ರಿಕೆಟ್ ಲೀಗ್‌ ಆಘಾತಕಾರಿ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಬಾಂಗ್ಲಾದೇಶದ ಸ್ಟಾರ್ ಆಲ್‌ರೌಂಡರ್ ಶಾಕೀಬ್ ಅಲ್ ಹಸನ್ ಆನ್-ಫೀಲ್ಡ್ ಅಂಪೈರ್ ಅವರ ಎಲ್‌ಬಿಡಬ್ಲ್ಯು ನಿರ್ಧಾರಕ್ಕೆ ಸಂಬಂಧಿಸಿ ಆಕ್ರೋಶಗೊಂಡು ಅಂಪೈರ್ ರೊಂದಿಗೆ ವಾಗ್ವಾದ ನಡೆಸಿದ್ದಲ್ಲದೆ ಸ್ಟಂಪ್ ಗೆ ಕಾಲಿನಿಂದ ಒದ್ದು, ಅದನ್ನು ಬೇರು ಸಹಿತ ಕಿತ್ತು ಹಾಕಿ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.

ಮೊಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ಹಾಗೂ  ಅಬಹಾನಿ ಲಿಮಿಟೆಡ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಮೊಹಮ್ಮದನ್ ಪರ ಆಡುತ್ತಿರುವ ಶಾಕೀಬ್, ತನ್ನ ಬಾಂಗ್ಲಾದೇಶ ತಂಡದ ಸಹ ಆಟಗಾರ ಮುಶ್ಫಿಕುರಹೀಮ್ ವಿರುದ್ಧ ಎಲ್‌ಬಿಡಬ್ಲ್ಯು ಗಾಗಿ ಮನವಿ ಮಾಡಿದ್ದರು. ಅಂಪೈರ್ ಔಟ್ ತೀರ್ಪು ನೀಡಲು ನಿರಾಕರಿಸಿದಾಗ ಶಾಕೀಬ್ ಅಂಪೈರ್‌ರೊಂದಿಗೆ ಮಾತಿನ ಚಕಮಕಿ ನಡೆಸಿದ್ದಲ್ಲದೆ ಹತಾಶೆಯಿಂದ ಸ್ಟಂಪ್‌ಗಳನ್ನು ಒದ್ದಿದ್ದಾರೆ.

ಸ್ವಲ್ಪ ಸಮಯದ ನಂತರ, ಶಾಕೀಬ್ ಮತ್ತೊಮ್ಮೆ ತನ್ನ ತಾಳ್ಮೆಯನ್ನು ಕಳೆದುಕೊಂಡು ಸ್ಟಂಪ್‌ಗಳನ್ನು ಬೇರುಸಹಿತ ಕಿತ್ತುಹಾಕಿ ಎಸೆದಿದ್ದಾರೆ.

ಮೊಹಮ್ಮದನ್ ತಂಡ ನಾಯಕ ಶಾಕೀಬ್ 27 ಎಸೆತಕ್ಕೆ 37 ರನ್ ಗಳಿಸಿದ್ದರಿಂದ ಮೊದಲು ಬ್ಯಾಟಿಂಗ್‌ ಮಾಡಿ 6 ವಿಕೆಟ್ ನಷ್ಟಕ್ಕೆ  145 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಅಬಹಾನಿ 5.5 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 31 ರನ್ ಗಳಿಸಿತ್ತು.

ಶಾಕಿಬ್ ಈ ಪಂದ್ಯಾವಳಿಗಾಗಿ ಪಾಕಿಸ್ತಾನ ಸೂಪರ್ ಲೀಗ್‌ನಿಂದ ಹೊರಗುಳಿದಿದ್ದರು. ಶಾಕೀಬ್‌ ಅವರ ಆಘಾತಕಾರಿ ವರ್ತನೆಗೆ  ಬಾಂಗ್ಲಾದೇಶ ಯಾವ ಶಿಸ್ತು ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News