×
Ad

ಟೈಲರ್ಸ್‌ಗಳಿಗೆ ಘೋಷಿಸಿದ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿ: ಟೈಲರ್ಸ್ ಅಸೋಸಿಯೇಶನ್ ಅಸಮಾಧಾನ

Update: 2021-06-12 11:29 IST

ಮಂಗಳೂರು, ಜೂ. 12: ಅಸಂಘಟಿತ ಕಾರ್ಮಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಟೈಲರ್‌ಗಳು ತಮ್ಮ ಬಗ್ಗೆ ರುಜುವಾತು ಮಾಡಲು ಸರಕಾರ ಸೂಚಿಸಿದ ಅಧಿಕಾರಿಗಳ ಬಳಿ ಹೋದಾಗ ಲೈಸನ್ಸ್ ಕೇಳುತ್ತಿದ್ದಾರೆ. ಮನೆಯಲ್ಲಿಯೇ ಕೆಲಸ ಮಾಡುತ್ತಿರುವುದಾಗಿ ಹೇಳಿದರೂ ಸಹಿ ಹಾಕುತ್ತಿಲ್ಲ. ಹಾಗಾಗಿ ಸರಕಾರ ಟೈಲರ್ಸ್‌ಗಳಿಗೆ ಘೋಷಣೆ ಮಾಡಿದ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಕರ್ನಾಟಕ ಟೈಲರ್ಸ್ ಅಸೋಸಿಯೇಶನ್ ಆರೋಪಿಸಿದೆ.

ನಂತರ ಮಾತನಾಡಿದ ಅಸೋಸಿಯೇಶನ್‌ನ ರಾಜ್ಯಾಧ್ಯಕ್ಷ ಕೆ.ಎಸ್. ಆನಂದ್, ಮನೆಯಲ್ಲಿ ಕೆಲಸ ಮಾಡುವವರೂ ಲೈಸೆನ್ಸ್ ಮಾಡಬೇಕೆಂಬ ನಿಯಮ ಇದೇಯೇ ಎಂದು ಪ್ರಶ್ನಿಸಿದರು.

ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ಇದೇ ನೆಪವಿಟ್ಟು ಸರಕಾರ ಘೋಷಿಸಿದ ಪ್ಯಾಕೇಜ್‌ನಿಂದ ಬಡ ಟೈಲರ್‌ಗಳನ್ನು ವಂಚಿಸಲಾಗು ತ್ತಿದೆ. ಈ ಗೊಂದಲವನ್ನು ನಿವಾರಿಸಬೇಕು ಎಂದು ಅವರು ಆಗ್ರಹಿಸಿದರು.

ಕೋವಿಡ್ ಮಾರ್ಗಸೂಚಿಯಂತೆ ಟೈಲರ್ ವೃತ್ತಿ ನಡೆಸುವವರು ಅಂಗಡಿ ಬಾಗಿಲು ತೆರೆಯದೆ ಮನೆಯಲ್ಲಿಯೇ ಇದ್ದಾರೆ. ಇದೀಗ ಸರಕಾರ ಘೋಷಿಸಿದ 2000 ರೂ. ಪ್ಯಾಕೇಜ್ ಪಡೆಯಲು ಎಪಿಎಲ್ ಮತ್ತು ಬಿಪಿಎಲ್ ಮಾನದಂಡ ಟೈಲರ್ ವೃತ್ತಿ ಬಾಂಧವರ ಜತೆಗೆ ತಾರತಮ್ಯ ಮಾಡಲಾಗಿದೆ. ಈ ಮಾನದಂಡವಿಲ್ಲದೆ ಎಲ್ಲಾ ಟೈಲರ್‌ಗಳಿಗೆ ಸರಕಾರದ ಯೋಜನೆ ಸಿಗುವಂತಾಗಬೇಕು. ನಮ್ಮ ಸಂಘಟನೆಯ ಗುರುತು ಕಾರ್ಡ್ ತೋರಿಸಿದರೆ ಅಧಿಕಾರಿಗಳು ಸಹಿ ಹಾಕಿ ಪ್ಯಾಕೇಜ್ ನೀಡಲು ಸಹಕರಿಸಬೇಕು. ಈ ಬಗ್ಗೆ ಸರಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಆಗ್ರಹಿಸಿದರು.

ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ಹೆಚ್ಚಿನ ಟೈಲರ್‌ಗಳು ಸ್ಮಾರ್ಟ್ ಕಾರ್ಡ್ ಮಾಡಿಸಿದ್ದಾರೆ. 2018ರಲ್ಲಿ ಅರ್ಜಿ ಕೊಟ್ಟಿದ್ದರೂ ಕಾರ್ಡ್ ಬಂದಿಲ್ಲ. ಬಂದಿರುವ ಕಾರ್ಡ್‌ಗಳಲ್ಲಿ ಹೆಚ್ಚಿನವರ ವೃತ್ತಿ ಬದಲಾವಣೆಯಾಗಿದೆ. ಟೈಲರ್ ವೃತ್ತಿ ಮಾಡುತ್ತಿರುವವರಿಗೆ ಚಿಂದಿ ಆಯುವವರು ಎಂದು ಮುದ್ರಿತವಾಗಿದ್ದರೆ, ಹಮಾಲಿಗಳು ಎಂದು ಮುದ್ರಿತವಾಗಬೇಕಾದ ಕಾರ್ಡ್‌ಗಳಲ್ಲಿ ಟೈಲರ್‌ಗಳು ಎಂದು ಮುದ್ರಿಸಲಾಗಿದೆ. ಇದನ್ನು ಸರಿಪಡಿಸುವ ಆಶ್ವಾಸನೆ ನೀಡಿದ್ದರೂ ಇನ್ನೂ ಮಾಡಲಾಗಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಬಿ. ವಸಂತ್, ಜಿಲ್ಲಾಧ್ಯಕ್ಷ ಪ್ರಜ್ವಲ್, ಕುಸುಮಾ ದೇವಾಡಿಗ, ಸುರೇಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News