ಸಂಕಷ್ಟದ ವೇಳೆ ಆರ್ಥಿಕ ಹೊರೆ ಬಗ್ಗೆ ಬಿಜೆಪಿ ಉತ್ತರಿಸಲಿ: ಐವನ್ ಡಿಸೋಜಾ
ಮಂಗಳೂರು, ಜೂ. 12: ಕೊರೋನ ಸಂಕಷ್ಟದ ಸಂದರ್ಭ ಕೆಲಸವಿಲ್ಲದೆ ಕಂಗೆಟ್ಟಿರುವ ಜನರ ಮೇಲೆ ಇಂಧನ ಬೆಲೆ ಏರಿಕೆಯ ಮೂಲಕ ಆರ್ಥಿಕ ಹೊರೆಯನ್ನು ಹೇರುತ್ತಿರುವ ಬಗ್ಗೆ ಬಿಜೆಪಿ ಉತ್ತರಿಸಬೇಕು ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜಾ ಒತ್ತಾಯಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಯು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿ ಎಲ್ಲಾ ವರ್ಗದ ಜನರ ಮೇಲೆ ಹೊರೆಯಾಗಿಸಿದೆ ಎಂದು ಅವರು ಹೇಳಿದರು.
ಕಳೆದ ಬಾರಿಯೂ ಕೊರೋನ ಸಂಕಷ್ಟದ ಸಂದರ್ಭದಲ್ಲೇ ಸಂಸತ್ತಿನಲ್ಲಿ ಯಾವುದೇ ಚರ್ಚೆಯಾಗದೆ ರೈತ ವಿರೋಧಿ ಕಾನೂನು ಜಾರಿಗೊಳಿಸಲಾಯಿತು. ಈ ಬಾರಿ ನಿರಂತರವಾಗಿ ಇಂಧನ ಬೆಲೆಯನ್ನು ಏರಿಕೆ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ ಬೆಲೆ 70 ಡಾಲರ್‌ಗಳಿರುವಾಗ ಎಲ್ಲಾ ತೆರಿಗೆಗಳನ್ನು ಹೇರಿಯೂ 60 ರೂ. ದರದಲ್ಲಿ ಪೆಟ್ರೋಲ್ ನೀಡಬಹುದು. 50 ರೂ.ಗೆ ಡೀಸೆಲ್ ಹಾಗೂ 450 ರೂ.ಗಳಿಗೆ ಅಡುಗೆ ಅನಿಲ ನೀಡಬಹುದು. ಇದನ್ನು ಜಾರಿಗೊಳಿಸಬೇಕೆಂಬುದು ನಮ್ಮ ಹೋರಾಟ ಎಂದು ಐವನ್ ಡಿಸೋಜಾ ಹೇಳಿದರು.
ಅಸಂಘಟಿತಕ ಕಾರ್ಮಿಕರಿಗೆ ರಾಜ್ಯ ಸರಕಾರ ಘೋಷಿಸಿರುವ ಪ್ಯಾಕೇಜ್ ಹಣವನ್ನು ಪಡೆಯಲು ಅನುಕೂಲವಾಗುವಂತೆ ಅರ್ಹ ಫಲಾನುಭವಿಗಳಿಗೆ ನೋಂದಾವಣೆಗೆ ಕಾಂಗ್ರೆಸ್ ಹೆಲ್ಪ್‌ಲೈನ್ ವತಿಯಿಂದ ಸಹಕರಿಸಲಾಗುವುದು ಎಂದು ಅವರು ಹೇಳಿದರು.
ಮುಖಂಡರಾದ ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ನವೀನ್ ಡಿಸೋಜಾ, ಮುಹಮ್ಮದ್ ಕುಂಜತ್ತಬೈಲ್, ಅಪ್ಪಿ, ಶುಭೋದಯ ಆಳ್ವ, ಚಿತ್ತರಂಜನ್ ಶೆಟ್ಟಿ, ಭಾಸ್ಕರ್ ರಾವ್, ಹಸನ್ ಫಳ್ನೀರ್‌ಮನುರಾಜ್, ಅಶಿತ್ ಪಿರೇರಾ, ಸಿ.ಎಂ. ಮುಸ್ತಫ, ಸತೀಶ್ ಪೆಂಗಲ್, ದಿಕ್ಸಿತ್ ಅತ್ತಾವರ, ಜೇಮ್ಸ್ ಶಿವಬಾಗ್, ಸೋನ್ಸ್ ಯೂಸುಫ್ ಉಚ್ಚಿಲ್, ಮೀನಾ ಟೆಲ್ಲಿಸ್, ತೆರೆಝ ಪಿಂಟೋ, ಇಮ್ರಾನ್ ಎ.ಆರ್. ಸಲೀಂ ಮುಕ್ಕ ಮೊದಲಾದವರು ಉಪಸ್ಥಿತರಿದ್ದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ದ.ಕ. ಜಿಲ್ಲೆಯ ಎಲ್ಲಾ ಪೆಟ್ರೋಲ್ ಪಂಪ್‌ಗಳ ಎದುರು ಪ್ರತಿಭಟನೆಗೆ ನಿರ್ಧರಿಸ ಲಾಗಿದೆ. ಇದೇ ವೇಳೆ ಕೋವಿಡ್ ಹೆಲ್ಪ್‌ಲೈನ್ ವತಿಯಿಂದ ಜೂ. 14ರಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಯನ್ನು ನಡೆಸಲಾಗುವುದು. ಕೋವಿಡ್ ನಿಯಂತ್ರಣಕ್ಕೆ ಪ್ರಧಾನಿ ಮೋದಿಯವರು ಚಪ್ಪಾಳೆ, ದೀಪ ಬೆಳಗಿಸಿ, ಶಂಖ ಊದಿ ಜಾಗಟೆ ಬಾರಿಸಲು ಹೇಳಿದ್ದರು. ಅದೆಲ್ಲವನ್ನೂ ಮಾಡಿಕೊಂಡು ಸೋಮವಾರ 4 ಕಿ.ಮೀ. ಪಾದಯಾತ್ರೆ ಮಾಡುವ ಮೂಲಕ ಇಂಧನ ಬೆಲೆ ಇಳಿಕೆಗೆ ಒತ್ತಾಯಿಸಿ ಪ್ರತಿಭಟಿಸಲಾಗುವುದು ಎಂದು ಐವನ್ ಡಿಸೋಜಾ ಹೇಳಿದರು.