×
Ad

ಯುಪಿಎ ತಂದ 'ಮನ್‍ರೇಗಾ' ಯೋಜನೆಯನ್ನು ಕೊಂಡಾಡಿದ ಗುಜರಾತಿನ ಬಿಜೆಪಿ ಸರಕಾರ!

Update: 2021-06-12 13:02 IST

ಅಹ್ಮದಾಬಾದ್ : ಹಿಂದಿನ ಯುಪಿಎ ಸರಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯನ್ನು  (ಮನ್‍ರೇಗಾ) ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕಳೆದ ವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ರಾಜ್ಯ ಸರಕಾರ ಕೊಂಡಾಡಿದೆಯಲ್ಲದೆ, ಕೋವಿಡ್ ಲಾಕ್‍ಡೌನ್‍ನಿಂದಾಗಿ ತಮ್ಮ ಗ್ರಾಮಗಳಿಗೆ ವಾಪಸಾಗಬೇಕಾಗಿ ಬಂದ ವಲಸಿಗ ಕಾರ್ಮಿಕರ ಪಾಲಿಗೆ ಇದು 'ಜೀವದಾನ'ವಾಗಿದೆ ಎಂದು ಹೇಳಿದೆ.

ಅಚ್ಚರಿಯೆಂದರೆ ಪ್ರಧಾನಿ ನರೇಂದ್ರ ಮೋದಿ 2015ರಲ್ಲಿ ಮಾತನಾಡುತ್ತಾ ಇದೇ ಯೋಜನೆಯನ್ನು ಟೀಕಿಸಿ ಇದು 'ಕಾಂಗ್ರೆಸ್ಸಿನ ವೈಫಲ್ಯಗಳ ಸ್ಮಾರಕ' ಎಂದಿದ್ದರು.

ವಲಸಿಗ ಕಾರ್ಮಿಕರಿಗೆ  ಕೃಷಿಯು ಸಹಾಯಕವಾಯಿತು ಹಾಗೂ ಸರಕಾರ ಸಮಸ್ಯೆಗೆ ಪರಿಹಾರವಾಗಿ "ಕೃಷಿಗೆ ಆದ್ಯತೆ'' ನೀಡಬೇಕು ಎಂದು ಗುಜರಾತ್ ಸಿಎಂ ಬಿಡುಗಡೆಗೊಳಿಸಿದ ವರದಿ ಹೇಳಿದೆ.

ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರವಾಗಿ ಮನ್‍ರೇಗಾ ಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಅದರಲ್ಲಿ ಹೇಳಲಾಗಿದೆ.

"ಗುಜರಾತ್ ಮೇಲೆ ಕೋವಿಡ್-19 ಪರಿಣಾಮಗಳು'' ಕುರಿತ ಈ ವರದಿಯನ್ನು ರಾಜ್ಯ ಸರಕಾರದ ಹವಾಮಾನ ಬದಲಾವಣೆ ಇಲಾಖೆಯು ಐಐಎಂ ಅಹ್ಮದಾಬಾದ್ ಹಾಗೂ ಐಐಟಿ-ಗಾಂಧಿನಗರ್ ಸಹಯೋಗದೊಂದಿಗೆ ಹೊರತಂದಿದೆ.

ಕಳದೆ ವರ್ಷದ ಲಾಕ್ ಡೌನ್ ನಂತರ ಸುಮಾರು ಒಂದು ಲಕ್ಷ ವಲಸಿಗ ಕಾರ್ಮಿಕರು ದಹೋದ್ ನ ತಮ್ಮ ಗ್ರಾಮಗಳಿಗೆ ವಾಪಸಾಗಿದ್ದಾರೆ, ಸರಕಾರ ಉದ್ಯೋಗಾವಕಾಶಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮನ್‍ರೇಗಾ ಕಾರ್ಮಿಕರಿಗೆ ಜೀವದಾನವಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News