ದಾನಿಶ್ ಸೇಟ್ 'ಅಂತರ್ಧರ್ಮೀಯ' ವಿವಾಹಕ್ಕೆ ಶುಭ ಕೋರಿದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ

Update: 2021-06-12 12:42 GMT

ಬೆಂಗಳೂರು: ಹಾಸ್ಯ ನಟ, ನಿರೂಪಕ ದಾನಿಶ್‌ ಸೇಟ್‌ ತಮ್ಮ ಗೆಳತಿ ಆನ್ಯಾ ರಂಗಸ್ವಾಮಿಯವರನ್ನು ವಿವಾಹವಾಗಿದ್ದಾರೆ. ಕೋವಿಡ್‌ ಕಾರಣದಿಂದಾಗಿ ಅದ್ದೂರಿ ಕಾರ್ಯಕ್ರಮ ನಡೆಸದೇ ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಪರಸ್ಪರ ಉಂಗುರ ಬದಲಾಯಿಸಿದ್ದರು. ಟ್ವಿಟರ್‌ ನಲ್ಲೂ ತಮ್ಮ ವಿವಾಹದ ಕುರಿತು ದಾನಿಶ್‌ ಚಿತ್ರಗಳನ್ನು ಹಂಚಿಕೊಂಡಿದ್ದು, ಹಲವಾರು ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ.

ಈ ನಡುವೆ ಸಂಸದ ತೇಜಸ್ವಿ ಸೂರ್ಯ ಹಾಗೂ ಪ್ರತಾಪ ಸಿಂಹ ಕೂಡಾ ದಾನಿಶ್‌ ಸೇಟ್‌ ಗೆ ಶುಭ ಕೋರಿದ್ದು ವಿವಾದ ಸೃಷ್ಟಿಸಿದೆ. ತಮ್ಮ ಅಧಿಕೃತ ಖಾತೆಯಲ್ಲಿ ಬಿಜೆಪಿಯ ಈ ಪ್ರಮುಖ ನಾಯಕರು ವಿವಾಹಕ್ಕೆ ಶುಭ ಕೋರಿದ್ದಾರೆ. ಆದರೆ ಅವರ ಅಭಿಮಾನಿಗಳು ಟ್ವಿಟರ್‌ ನಲ್ಲೇ ನಿರಾಶೆ ವ್ಯಕ್ತಪಡಿಸಿದ್ದಾರೆ. ಬಡವರ ಪ್ರೀತಿ, ಪ್ರೇಮಗಳಿಗೆ ಮಾತ್ರ ʼಲವ್‌ ಜಿಹಾದ್‌ʼ ಎಂಬ ಹಣೆಪಟ್ಟಿ ಕಟ್ಟಿ ದ್ವೇಷ ಸೃಷ್ಟಿಸುವ ನಾಯಕರು ಶ್ರೀಮಂತರ ಮದುವೆಗೆ ಶುಭ ಹಾರೈಸುತ್ತಾರೆ ಎಂದು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼಲವ್‌ ಜಿಹಾದ್‌ʼ ಕುರಿತು ತೇಜಸ್ವಿ ಸೂರ್ಯ ಈ ಹಿಂದೆ ಪ್ರಕಟಿಸಿದ್ದ ಟ್ವೀಟ್‌ ಗಳನ್ನೂ ಸದ್ಯ ಮುನ್ನೆಲೆಗೆ ತರಲಾಗಿದೆ.

"ಇದು ಯಾವ ಜಿಹಾದ್‌ ಆಗಿರಬಹುದು? ನಿಮ್ಮಿಂದ ಇಂತಹಾ ಶುಭಾಶಯ ಸಂದೇಶವನ್ನು ನಿರೀಕ್ಷಿಸಿರಲಿಲ್ಲ ಎಂದು  ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ನೀವು ಮತ್ತು ಕೇಂದ್ರದ ನರೇಂದ್ರ ಮೋದಿ ಸರಕಾರ ಇಂತಹಾ ಪ್ರಕರಣಗಳನ್ನು ತಡೆಯಬೇಕೇ ಹೊರತು ಪ್ರೋತ್ಸಾಹಿಸುವುದು ಸರಿಯಲ್ಲ, ಇದು ನಿಮ್ಮ ಲವ್‌ ಜಿಹಾದ್‌ ವ್ಯಾಪ್ತಿಗೆ ಬರುವುದಿಲ್ಲವೇ" ಎಂದು ವ್ಯಕ್ತಿಯೋರ್ವರು ಪ್ರತಿಕ್ರಿಯಿಸಿದ್ದಾರೆ.

ತೇಜಸ್ವಿ ಸೂರ್ಯ "ಶುಭಾಶಯಗಳು, ನಿಮ್ಮ ವೈವಾಹಿಕ ಜೀವನವು ಸಂತಸಮಯವಾಗಿರಲಿ, ಬ್ರದರ್‌" ಎಂದು ಟ್ವೀಟ್‌ ಮಾಡಿದ್ದರೆ ಪ್ರತಾಪ ಸಿಂಹ, "ಶುಭಾಶಯಗಳುʼ ಎಂದು ಟ್ವೀಟ್‌ ಮಾಡಿದ್ದಾರೆ. ಇವರಿಬ್ಬರದಲ್ಲದೇ ಅನಿಷ್ಕಾ ಶರ್ಮಾ, ನಟ ಸಿದ್ಧಾರ್ಥ್‌, ಸುನೀತಾ ಕಪೂರ್‌ ಸೇರಿದಂತೆ ಹಲವು ಮಂದಿ ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ. ಈ ನಡುವೆ ಇಬ್ಬರು ಬಿಜೆಪಿ ಸಂಸದರ ಇಬ್ಬಗೆಯ ನೀತಿಯ ಕುರಿತಾದಂತೆ ಸಾಮಾಜಿಕ ತಾಣದಾದ್ಯಂತ ಚರ್ಚೆಯಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News